ರಾಜ್ಯದಲ್ಲಿ 582ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಆರೋಗ್ಯ ಇಲಾಖೆಯು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಹೈಕೋರ್ಟ್ ಆದೇಶದ ಬಳಿಕ 2025 ರಲ್ಲಿ ನಕಲಿ ವೈದ್ಯರ ಪತ್ತೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ನಕಲಿ ಔಷಧ ಜಾಲ ಹಾಗೂ ನಕಲಿ ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಆರೋಗ್ಯ ಇಲಾಖೆಯು 2024 ಹಾಗೂ 26ರಲ್ಲಿ ರಾಜ್ಯದಲ್ಲಿ 582 ನಕಲಿ ಕ್ಲಿನಿಕ್ಗಳನ್ನು ಮುಚ್ಚಿದೆ, ೮೭ ಮಂದಿಗೆ ದಂಢ ವಿಧಿಸಿದೆ.೨೯ ಜನರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ.
ಹೆಚ್ಚಿನ ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲಿ ಪತ್ತೆಯಾಗಿದೆ. ಕಲಬುರಗಿಯಲ್ಲಿ 127 ಪ್ರಕರಣಗಳು ದಾಖಲಾಗಿವೆ. ರಾಯಚೂರಿನಲ್ಲಿ 124, ಧಾರವಾಡದಲ್ಲಿ 75, ಕೋಲಾರದಲ್ಲಿ 31, ವಿಜಯಪುರದಲ್ಲಿ 24, ಬಳ್ಳಾರಿಯಲ್ಲಿ 23, ದಕ್ಷಿಣ ಕನ್ನಡದಲ್ಲಿ 20, ಚಿಕ್ಕಬಳ್ಳಾಪುರದಲ್ಲಿ 17, ಬೆಂಗಳೂರು ನಗರದಲ್ಲಿ 16 ಹಾಗೂ ಕೊಪ್ಪಳದಲ್ಲಿ 14 ನಕಲಿ ವೈದ್ಯರ ಪತ್ತೆ ಪ್ರಕರಣಗಳು ದಾಖಲಾಗಿವೆ.
ನಕಲಿ ವೈದ್ಯರಲ್ಲಿ ಬಹುತೇಕರು ಅಧಿಕೃತ ಮೆಡಿಕಲ್ ಪದವಿ ಹೊಂದಿಲ್ಲ. ಆಸ್ಪತ್ರೆಗಳಲ್ಲಿ ನರ್ಸ್ಗಳು, ವಾರ್ಡ್ ಬಾಯ್ಗಳು ಅಥವಾ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಾ ಚಿಕಿತ್ಸೆ ಬಗ್ಗೆ ತಿಳಿದುಕೊಂಡಿದ್ದವರು. ಕ್ಲಿನಿಕ್ಗಳಲ್ಲಿ ವೈದ್ಯರ ಅಧಿಕೃತ ಮೆಡಿಕಲ್ ಕೌನ್ಸಿಲ್ ನೋಂದಣಿ ಪ್ರಮಾಣಪತ್ರ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.


