ಪಾದಯಾತ್ರೆಯಿಂದ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಬಿಜೆಪಿಯವರಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಟೀಕಿಸಿದರು.
ಮಡಿಕೇರಿಯಲ್ಲಿ ಬಿಜೆಪಿಯ ಪಾದಯಾತ್ರೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಈ ಹಿಂದೆ ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿಕೆರವಿ ಪ್ರಕರಣ, ಡಿವೈಎಸ್ಪಿ ಗಣಪತಿ ಪ್ರಕರಣ ಸೇರಿದಂತೆ ಎಲ್ಲ ಪ್ರಕರಣಗಳಲ್ಲೂ ನನ್ನ ಮೇಲೆ ಆರೋಪ ಮಾಡಿದ್ದರು. ಸಿಬಿಐ ತನಿಖೆಯಿಂದ ವರದಿ ಬಂದು ಆ ಪ್ರಕರಣಗಳಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದರು.
ಈಗ ನಾಗೇಂದ್ರ ರಾಜೀನಾಮೆ ಆಗಿದೆ. ಮತ್ತೆ ಪಾದಯಾತ್ರೆ ಏಕೆ ಮಾಡುತ್ತಾರೆ, ಪಾದಯಾತ್ರೆಯಿಂದ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ಮಾಡುವಾಗ ವಿಚಾರಗಳಿದ್ದವು. ಇವರಿಗೆ ವಿಚಾರಗಳಿಲ್ಲ, ಜನಬೆಂಬಲವೂ ಇಲ್ಲ. ಪಾದಯಾತ್ರೆಯಿಂದ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಬಿಜೆಪಿಯವರಿದ್ದಾರೆ ಎಂದು ಕುಟುಕಿದರು.
ಮೈಸೂರಿನಲ್ಲಿ ನಡೆಯುವ ಅಹಿಂದ ಸಮಾವೇಶ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿ, ಅವರವರ ವಿಚಾರಧಾರೆಯಲ್ಲಿ ಸಮಾವೇಶ ಮಾಡುತ್ತಾರೆ. ಸಮಾವೇಶ ಮಾಡುವುದರಲ್ಲಿ ತಪ್ಪೇನಿದೆ? ಕಾಂಗ್ರೆಸ್ ಪಕ್ಷಕ್ಕೆ ಜಾತಿ ಇಲ್ಲ. ಹಿಂದುಳಿದ, ಅಲ್ಪಸಂಖ್ಯಾತರ ಏಳಿಗೆ ನಮ್ಮ ಗುರಿ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾತಿ ನೋಡಿ ಕೊಟ್ಟಿಲ್ಲ. ಜನಸಂಖ್ಯೆ ಆಧಾರದಲ್ಲಿ ನೋಡುವುದಾದರೆ ಅವರ ಸಂಖ್ಯೆ ಹೆಚ್ಚಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ ಜಾಗ ಶುದ್ಧೀಕರಣ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಖರ್ಗೆ ನಮ್ಮ ಹಿರಿಯ ನಾಯಕರು, ಅವರಿಗೆ ಅವಮಾನ ಮಾಡುವುದು ಸರಿಯಲ್ಲ. ಎಲ್ಲಾ ಧರ್ಮದವರು ಇಲ್ಲಿ ಅಣ್ಣತಮ್ಮಂದಿರಂತೆ ಇದ್ದೇವೆ. ಎಲ್ಲಾ ಧರ್ಮಕ್ಕೂ, ಎಲ್ಲಾ ವ್ಯಕ್ತಿಗಳಿಗೂ ಗೌರವ ನೀಡಬೇಕು. ಈ ರೀತಿಯ ವರ್ತನೆಯನ್ನು ಜನ ಒಪ್ಪುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡಿ ಚುನಾವಣೆಯಲ್ಲಿ ಸೋಲಿಸಿದರು. ಅವರನ್ನು ಗೌರವದಿಂದ ರಾಜ್ಯಸಭಾ ಸದಸ್ಯರಾಗಿ ಮಾಡಿದ್ದೇವೆ ಎಂದು ಹೇಳಿದರು.


