ರಾತ್ರಿ ಬಯಲು ಶೌಚಕ್ಕೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ 21 ವರ್ಷದ ಯುವತಿಯ ಮೃತದೇಹ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಶ್ವಿನಿ (21) ಮೃತ ಯುವತಿ ಎಂದು ಗುರುತಿಸಲಾಗಿದೆ. ರಾತ್ರಿ ಬಯಲು ಶೌಚಾಲಯಕ್ಕೆ ತೆರಳಿದ್ದ ವೇಳೆ ಅಶ್ವಿನಿ ನಾಪತ್ತೆಯಾಗಿದ್ದಳು. ಬೆಳಗ್ಗೆ ರೈತರು ಜಮೀನಿಗೆ ತೆರಳಿದ್ದ ವೇಳೆ ಬಾವಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಯುವತಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಯುವತಿಗೆ ಕಳೆದ ಒಂದು ತಿಂಗಳ ಹಿಂದೆ ವಿವಾಹಕ್ಕಾಗಿ ನಿಶ್ಚಿತಾರ್ಥವಾಗಿತ್ತು ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ಅರುಣಾಂಗ್ಷು ಗಿರಿ ಹಾಗೂ ಸಿರವಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ಸಾವಿಗೆ ನಿಖರ ಕಾರಣ ಹಾಗೂ ಘಟನೆ ಹಿಂದಿರುವವರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


