Menu

ಸ್ನೇಹಿತನ ಪತ್ನಿಯ ಅತ್ಯಾಚಾರ, ಕೊಲೆಗೈದು ಪಾಳು ಬಾವಿಗೆ ಶವ ಎಸೆದ ಆರೋಪಿಗಳ ಬಂಧನ

ಚಳ್ಳಕೆರೆ ನಾಯಕನಹಟ್ಟಿ ಹೋಬಳಿಯ ಎನ್. ಮಹದೇವಪುರ ಗ್ರಾಮದ ಹೊರವಲಯದ ಪಾಳುಬಿದ್ದ ಬಾವಿಯಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದ ನವವಧು ಸುಮಲತಾ ಅವರ ಸಾವಿನ ಪ್ರಕರಣವನ್ನು  ಪೊಲೀಸರು 48 ಗಂಟೆಗಳೊಳಗೆ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸುಮಲತಾ ಅವರ ಪತಿ ಗಜೇಂದ್ರನ ಸ್ನೇಹಿತ ಬೋರಯ್ಯ ಎಂಬಾತ ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಶವವನ್ನು ಪಾಳುಬಿದ್ದ ಬಾವಿಗೆ ಎಸೆದಿದ್ದಾನೆ. ಕೃತ್ಯಕ್ಕೆ ಬೋರಯ್ಯನ ಸಹೋದರ ಕಾರಯ್ಯ ಸಹಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಲತಾ ಮತ್ತು ಗಜೇಂದ್ರ  ಶುಕ್ರವಾರ ಈಶ್ವರ ದೇವಾಲಯದಲ್ಲಿ ವಿವಾಹವಾಗಿದ್ದು, ಬಳಿಕ ಕುರಿರೊಪ್ಪಕ್ಕೆ ಬಂದಿದ್ದರು. ಅಲ್ಲಿ ಗಜೇಂದ್ರ, ಬೋರಯ್ಯ, ಆತನ ಸಹೋದರ ಕಾರಯ್ಯ ಹಾಗೂ ಅಶೋಕ ಅವರಿಗೆ ಸುಮಲತಾ ಊಟ ಬಡಿಸಿದ್ದರು.

ಬಟ್ಟೆ ಬದಲಿಸಲು ಕುರಿರೊಪ್ಪದಲ್ಲಿ ಸೂಕ್ತ ಸ್ಥಳವಿಲ್ಲದ ಹಿನ್ನೆಲೆಯಲ್ಲಿ ಸುಮಲತಾ ಸಮೀಪದ ಸೀಮೆಜಾಲಿ ಪೊದೆಗಳ ಬಳಿ ತೆರಳಿದ್ದರು. ಈ ವೇಳೆ ಕಾರಯ್ಯ ಕುರಿ ಮೇಯಿಸಲು ತೆರಳಿದ್ದನು. ಪೊಲೀಸರು ನಡೆಸಿದ ತನಿಖೆಯ ಪ್ರಕಾರ, ಬೋರಯ್ಯ ತನ್ನ ಸ್ನೇಹಿತರಾದ ಗಜೇಂದ್ರ ಮತ್ತು ಅಶೋಕ ಅವರಿಗೆ ನೆಪವೊಂದನ್ನು ಹೇಳಿ ಸುಮಲತಾ ಇದ್ದ ಸ್ಥಳಕ್ಕೆ ತೆರಳಿದ್ದಾನೆ.  ಅಲ್ಲಿ ಬೋರಯ್ಯ ಸುಮಲತಾ ಅವರ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಕೃತ್ಯದ ಬಳಿಕ ಬೋರಯ್ಯ ತನ್ನ ಸಹೋದರ ಕಾರಯ್ಯನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಇಬ್ಬರೂ ಸೇರಿ ಸುಮಲತಾ ಅವರ ಶವವನ್ನು ಸಮೀಪದಲ್ಲಿದ್ದ ಪಾಳುಬಿದ್ದ ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಗಜೇಂದ್ರನೊಂದಿಗೆ ಸೇರಿಕೊಂಡು ಸುಮಲತಾ ನಾಪತ್ತೆಯಾಗಿರುವಂತೆ ಬಿಂಬಿಸಿ ಹುಡುಕಾಟ ನಡೆಸಿದ ನಾಟಕವಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಗಜೇಂದ್ರ ಹಾಗೂ ಆತನ ಮದುವೆಗೆ ಸಹಕರಿಸಿದ್ದ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ಹೊರಬಂದಿದೆ. ಪ್ರಕರಣದಪ್ರಮುಖ ಆರೋಪಿ  ಬೋರಯ್ಯ ಹಾಗೂ ಕೃತ್ಯಕ್ಕೆ ಸಹಕರಿಸಿದ ಕಾರಯ್ಯನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವನ್ನು ತ್ವರಿತವಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ತನಿಖಾ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ.

ವೃತ್ತ ನಿರೀಕ್ಷಕ ಹನುಮಂತಪ್ಪ ಎಂ. ಶಿರೀಹಳ್ಳಿ, ನಾಯಕನಹಟ್ಟಿ ಪಿಎಸ್ಐ ಜಿ. ಪಾಂಡುರಂಗ, ತಳಕು ಪಿಎಸ್ಐ ಕೆ. ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ಇ.ಎಂ. ಬಾಷಾ, ಅಜ್ಜಯ್ಯ, ಶ್ರೀಹರಿ, ತಿಮ್ಮೇಶ್, ರಾಜು, ವೀರೇಶ್, ಕುಮಾರ್, ತಳಕು ಠಾಣೆಯ ವೀರಭದ್ರಪ್ಪ, ರಂಗಸ್ವಾಮಿ, ಯರಬಾಳ ಬಸವರಾಜ್, ರವಿ ಮತ್ತು ದಿನೇಶ್  ತನಿಖಾ ಕಾರ್ಯದಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *