ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್ 2) ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರಿಗೆ ಆಹ್ವಾನ ನೀಡಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ಮೇಲ್ಮನವಿ ಸಲ್ಲಿಸಿದ್ದು, ಮುಂದೆ ಈ ವಿಚಾರವನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಸಂಸದರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸೋಮಣ್ಣ, ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರ ಜೊತೆ ಚರ್ಚೆ ಮಾಡಿದ್ದು, ಅವರು ರಾಜ್ಯದ ಹಿತಕ್ಕಾಗಿ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ ನಾಯಕರ ಬದಲು ದೆಹಲಿ ಸರ್ಕಾರವನ್ನು ಭೇಟಿ ಮಾಡಿ ಎಂದು ತಮಿಳುನಾಡು ಸಿಎಂ ವಿಜಯ್ ಅವರಿಗೆ ಡಿಎಂಕೆ ನಾಯಕ ಅನ್ಬುಮಣಿ ಸಲಹೆ ನೀಡಿರುವ ಬಗ್ಗೆ ಕೇಳಿದಾಗ,“ಆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ಪರಸ್ಪರ ಕಿತ್ತಾಟ ಮಾಡಲು ಇಷ್ಟವಿಲ್ಲ. ನೆಲದ ಕಾನೂನು ಇದೆ. ನಾವು ಪರಸ್ಪರ ಗೌರವಿಸಬೇಕು. ಇಡೀ ದೇಶ ಒಂದಾಗಿ ಕೆಲಸ ಮಾಡಬೇಕು ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, ಯಡಿಯೂರಪ್ಪನವರು ಕೂಡ ಸಚಿವ ಸಂಪುಟ ರಚನೆ ಮಾಡದೇ ಅಧಿಕಾರ ಮಾಡಿರಲಿಲ್ಲವೇ? ಆಗ ಅಪ್ಪ-ಮಗ ಅಧಿಕಾರವನ್ನು ಅನುಭವಿಸಲಿಲ್ಲವೇ? ಎಂದು ಮರುಪ್ರಶ್ನಿಸಿದರು.
ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನಂತೆ 15 ದಿನ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹೊರಡಿಸಿದೆ. ಆದರೆ ಈ ಆದೇಶಕ್ಕೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬರದ ಹಿನ್ನೆಲೆ ನೀರಿನ ಕೊರತೆಯಿದೆ ಎಂದು ವಾದಿಸಿದೆ.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ಸಮಿತಿ ಈ ಮಹತ್ವದ ಶಿಫಾರಸು ಮಾಡಿದೆ. ತಮಿಳುನಡಿನ ಬೇಡಿಕೆ ಹಿನ್ನೆಲೆ, ಪ್ರತಿ ದಿನ 3,500 ಕ್ಯೂಸೆಕ್ ನಂತೆ 15 ದಿನ ಒಟ್ಟು 4 ಟಿಎಂಸಿ ನೀರು ಹರಿಸಲು ಸಮಿತಿ ಸೂಚಿಸಿದೆ.
ಕರ್ನಾಟಕ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಮಗೆ ನೀರಿನ ಕೊರತೆ ಇದೆ. ಸಿಎಂ ಜೊತೆಗೆ ಚರ್ಚಿಸಿ ನಿರ್ಧರಿಸುತ್ತೇನೆ. ನಮಗೆ ಮಳೆ ಇಲ್ಲ, ವರ್ಷ ಪೂರ್ತಿ ಕುಡಿಯುವ ನೀರು ಬೇಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ. ಸದ್ಯ ಎದುರಿಸುತ್ತಿರುವ ವಾಸ್ತವ ಪರಿಸ್ಥಿತಿಯನ್ನು ಮತ್ತೆ ವಿವರಿಸಲು ಕರ್ನಾಟಕ ಸಜ್ಜಾಗಿದ್ದು, ಮಳೆ ಅಭಾವ ಮತ್ತು ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಕೊಡಲು ಸಿದ್ಧತೆ ನಡೆಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಈ ಆದೇಶಕ್ಕೆ ಕರ್ನಾಟಕದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ರಾಜ್ಯದಲ್ಲಿ ಅಗತ್ಯ ಪ್ರಮಾಣದ ಮಳೆಯಾಗದೆ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿದಿದೆ. ಕುಡಿಯುವ ನೀರಿನ ಪೂರೈಕೆ ಕೂಡ ಸವಾಲಾಗಿದೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವುದನ್ನು ಪ್ರಶ್ನಿಸಿ ಕರ್ನಾಟಕದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ರಾಜ್ಯದ ಪ್ರಸ್ತುತ ನೀರಿನ ಮಟ್ಟದ ವರದಿಯನ್ನು ಸಲ್ಲಿಸಿ, ಮತ್ತೊಮ್ಮೆ ವಿವರಣೆ ನೀಡಲು ಮುಂದಾಗಿದೆ.


