Menu

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ದೌರ್ಜನ್ಯ: ಎಸ್‌ಐಟಿ ರಚನೆಗೆ ಸುಪ್ರೀಂ ನಿರ್ಧಾರ

supreme court

ನೀಟ್ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ, ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳ ಕುರಿತು ಸ್ವತಂತ್ರ ವಿಶೇಷ ತನಿಖಾ ತಂಡ ಅಥವಾ ಉನ್ನತ ಮಟ್ಟದ ಸಮಿತಿ ರಚಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಈ ಆರೋಪಗಳ ಕುರಿತು ಸ್ವತಂತ್ರ, ಪಾರದರ್ಶಕ ಹಾಗೂ ಸಮಗ್ರ ತನಿಖೆಗೆ ಆದೇಶಿಸಬಾರದೇ ಎಂದು ಪ್ರಶ್ನಿಸಿತು. ಅದೇ ರಿತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕೆ ಬಂಧಿತರಾಗಿರುವ  ೧೮ ವರ್ಷದ ಕೆಳಗಿನ ವಿದ್ಯಾರ್ಥಿಗಳನ್ನು  ಬಿಡುಗಡೆಗೊಳಿಸುವಂತೆಯೂ ಆದೇಶಿಸಿದೆ.

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿಚಾರದಲ್ಲಿ ಕಾನೂನು ಕೈಗೆ ತೆಗೆದುಕೊಂಡು ಬಲಪ್ರಯೋಗದ ಕ್ರಮ ಕೈಗೊಂಡಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ಜರುಗಲೇಬೇಕು. ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳ ಕುರಿತು ನ್ಯಾಯಸಮ್ಮತ ಮತ್ತು ಸ್ವತಂತ್ರ ತನಿಖೆ ಅಗತ್ಯ ಎಂದು ಪೀಠ ಹೇಳಿದೆ.

ನಿಗದಿತ ನಿಯಮಾವಳಿ ಉಲ್ಲಂಘಿಸಿರುವುದು ಕಂಡುಬಂದರೆ ಕಾನೂನು ತನ್ನ ಕೆಲಸ ಮಾಡಲೇಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಎಲ್ಲಾ ಆರೋಪಗಳ ಕುರಿತೂ ಸ್ವತಂತ್ರ, ಪಾರದರ್ಶಕ ಮತ್ತು ಸಮಗ್ರ ತನಿಖೆ ನಡೆಸುವ ಬಗ್ಗೆ ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಸಿಜೆಐ ಹೇಳಿದರು.

250 ಪೊಲೀಸ್ ಸಿಬ್ಬಂದಿ ಮೇಲೆ ನಡೆದ ದಾಳಿಗಳ ಬಗ್ಗೆಯೂ ತನಿಖೆ ನಡೆಸಬೇಕಿದ್ದು, ಈ ಕೃತ್ಯ ಎಸಗಿದ್ದು ನಿಜವಾಗಿಯೂ ವಿದ್ಯಾರ್ಥಿಗಳೇ ಅಥವಾ ಸಮಾಜಘಾತುಕ ಅಂಶಗಳೇ ಎಂಬುದನ್ನು ಪತ್ತೆ ಹಚ್ಚುವುದು ಅಗತ್ಯ ಎಂದು ನ್ಯಾಯಪೀಠ ತಿಳಿಸಿದೆ.

ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿದ್ಯಾರ್ಥಿಗಳು ಪೊಲೀಸರ ಮೇಲೆ ಹಿಂಸಾಚಾರ ನಡೆಸಿರುವ ಸಾಧ್ಯತೆ ಕಡಿಮೆ ಎಂದು ವಾದಿಸಿದರು. ಕೊಲೆ, ಅತ್ಯಾಚಾರ ಮತ್ತು ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಮಾಜಘಾತುಕ ಶಕ್ತಿಗಳು ಪ್ರತಿಭಟನೆಯೊಳಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸೋಮವಾರ ನಡೆದ ವಿಚಾರಣೆ ವೇಳೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನದಿಂದ ಸಂಪೂರ್ಣವಾಗಿ ಖಾತರಿಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಪೊಲೀಸ್ ದೌರ್ಜನ್ಯ ಅಥವಾ ಲಾಠಿಚಾರ್ಜ್ ಅನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

Related Posts

Leave a Reply

Your email address will not be published. Required fields are marked *