ಡಿಜಿಟಲ್ ಮೌಲ್ಯಮಾಪನ ಮತ್ತು ಆಧುನಿಕ ತಂತ್ರಜ್ಞಾನವು, ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಬಾರದು. ಡಿಜಿಟಲ್ ಮೌಲ್ಯಮಾಪನವು ವೇಗವು ಹೆಚ್ಚಿಸಬಹುದಷ್ಟೆ. ಅದರೆ ಇದರಿಂದ ಮೌಲ್ಯಮಾಪನದ ಮೂಲ ಆಶಯಗಳಿಗೆ ಅತಿ ದೊಡ್ಡ ಹಾನಿಯಾಗಿರುವುದು ಅತಿ ಗಂಭೀರ.
ಉನ್ನತ ಶಿಕ್ಷಣದ ಪರೀಕ್ಷೆಗಳು ಮತ್ತು ಫಲಿತಾಂಶಗಳೀಗ ದೇಶದಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಪ್ರಶ್ನೆಪತ್ರಿಕೆ ಸೋರಿಕೆಯ ಭಯಾಂದೋಲನದ ನಡುವೆ ಪರೀಕ್ಷೆ ಮುಗಿದ ಕೆಲವೇ ನಿಮಿಷಗಳಲ್ಲಿ ಇವುಗಳ ಫಲಿತಾಂಶವೂ ಪ್ರಕಟವಾಗುತ್ತಿರುವುದು ಗಮನಾರ್ಹ. ಇಂಟರ್‌ನೆಟ್ ಹಾಗೂ ಡಿಜಿಟಲ್ ಯುಗದಲ್ಲಿ ಇಂತಹ ವಿದ್ಯಮಾನವೊಂದು ಸ್ವಾಗತಾರ್ಹವಾದರೂ ಇದರ ಹಿಂದಿನ ಕೆಲ ಕಷ್ಟ -ನಷ್ಟ ಮತ್ತು ಅನನುಕೂಲದ ಬಗ್ಗೆ ಕೂಡಾ ಆಲೋಚಿಸಬೇಕಿದೆ.
ರಾಜ್ಯದ ಕೆಲವೊಂದು ವಿವಿಗಳ ಪರೀಕ್ಷಾ ಮೌಲ್ಯಮಾಪನದ ವೈಖರಿಯನ್ನು ಗಂಭೀರವಾಗಿ ಅವಲೋಕಿಸಿದಾಗ ವಿದ್ಯಾರ್ಥಿಗಳ ಬದುಕಿಗೆ ಮಾರಕವಾದಂತಹ ಸಂಗತಿಗಳೇ ಅಧಿಕ. ಮೌಲ್ಯಮಾಪನ ಎಂದರೆ ವಿದ್ಯಾರ್ಥಿ ಬರೆದ ಉತ್ತರ ಪತ್ರಿಕೆಯ ಮೇಲೆ ಕೆಂಪು ಶಾಯಿಯಿಂದ ಮಾರ್ಕ್ ಮಾಡಿದಂತಹ ಕುರುಹುಗಳು ಮತ್ತು ಮೌಲ್ಯಮಾಪಕರು ಮೌಲ್ಯಮಾಪನದ ಸಮಯದಲ್ಲಿ ಬಳಸುವಂತಹ ಸಂಕೇತಗಳು ಅತಿ ಮುಖ್ಯ. ಆದರೆ ಈಗಿದು ಡಿಜಿಟಲ್ ಮೌಲ್ಯಮಾಪನದಲ್ಲಿ ಸಂಪೂರ್ಣ ಬದಲಾಗಿದೆ. ಡಿಜಿಟಲ್ ಮೌಲ್ಯಮಾಪನದ ಬಳಿಕ ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿ ಪಡೆದುಕೊಳ್ಳಲು ಕಾನೂನಿನಡಿ ಅವಕಾಶ ಇದ್ದರೂ , ಇಂತಹ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ತಾನು ಎಸಗಿದ ತಪ್ಪನ್ನು ಗುರುತಿಸಲು ಯಾವುದೇ ಸಂಕೇತಗಳು ಇರುವುದಿಲ್ಲ. ಒಂದು ರೀತಿಯಲ್ಲಿ ಕೆಲವೊಂದು ವಿವಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ವಿದ್ಯಾರ್ಥಿ ಸಮೂಹಕ್ಕೆ ಘೋರ ಅನ್ಯಾಯ ಆಗುವಂತಹ ದೋಷಪೂರ್ಣ ಸಂಗತಿಗಳೇ ಅಧಿಕ.
ಡಿಜಿಟಲ್ ಮೌಲ್ಯಮಾಪನ ಮತ್ತು ಆಧುನಿಕ ತಂತ್ರಜ್ಞಾನವು, ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಬಾರದು. ಡಿಜಿಟಲ್ ಮೌಲ್ಯಮಾಪನವು ವೇಗವು ಹೆಚ್ಚಿಸಬಹುದಷ್ಟೆ. ಅದರೆ ಇದರಿಂದ ಮೌಲ್ಯಮಾಪನದ ಮೂಲ ಆಶಯಗಳಿಗೆ ಅತಿ ದೊಡ್ಡ ಹಾನಿಯಾಗಿರುವುದು ಅತಿ ಗಂಭೀರ. ತ್ವರಿತ ಫಲಿತಾಂಶ ಮತ್ತು ತ್ವರಿತ ನ್ಯಾಯ. ಇವೆಲ್ಲವೂ ಇಂದಿನ ಆಧುನಿಕ ಪ್ರಪಂಚದ ಅತ್ಯಗತ್ಯ ಎಂಬುದೇನೋ ಸರಿ. ಆದರೆ ತ್ವರಿತ ಮತ್ತು ವೇಗದ ಅಬ್ಬರದಲ್ಲಿ ಹೊಸ ವ್ಯವಸ್ಥೆ ಅಥವಾ ಪದ್ದತಿಯಿಂದ ಸಂಭವಿಸುವ ಅವಾಂತರಗಳ ಬಗ್ಗೆಯೂ ಸಂಬಂಧಪಟ್ಟವರಿಗೆ ಸಂಪೂರ್ಣ ಕಾಳಜಿ ಮತ್ತು ಅವಗಾಹನೆ ಅಗತ್ಯ. ರಾಜ್ಯದ ಕಾನೂನು ವಿವಿ ನಡೆಸುವ ಮೌಲ್ಯಮಾಪನದ ಬಗ್ಗೆ ಕಾನೂನು ವ್ಯಾಸಂಗ ಮಾಡುತ್ತಿರುವ ಕೆಲವು ವಿದ್ಯಾರ್ಥಿಗಳಿಂದ ವ್ಯಾಪಕ ಟೀಕೆ, ಟಿಪ್ಪಣಿಗಳಿವೆ. ಈ ಮೌಲ್ಯಮಾಪನದಲ್ಲಿ ಹಲವಾರು ದೋಷಗಳಿವೆ. ಇದನ್ನು ಸರಿಪಡಿಸುವ ದಿಶೆಯಲ್ಲಿ ವಿವಿ ಮುಕ್ತ ಮನಸು ಹೊಂದಿಲ್ಲ. ಪದೇ ಪದೇ ಆಗುತ್ತಿರುವ ತಪ್ಪುಗಳ ಬಗ್ಗೆ ವಿವಿ ಗಂಭೀರ ದೃಷ್ಟಿ ಹರಿಸಿಲ್ಲ ಎಂಬುದು ವಿದ್ಯಾರ್ಥಿಗಳ ತಳಮಳ.
ಒಟ್ಟಿನಲ್ಲಿ ಇಂತಹ ವಿಷಯಗಳನ್ನು ಸಂಬಂಧಪಟ್ಟವರು ಸಕಾಲದಲ್ಲಿ ಗಂಭಿರವಾಗಿ ಆಲೋಚಿಸಿ ಸಮರ್ಪಕ ಕ್ರಮ ಜರುಗಿಸದಿದ್ದಲ್ಲಿ, ಭವಿಷ್ಯದಲ್ಲಿ ಇದರ ಬಗ್ಗೆಯೂ ವಿದ್ಯಾರ್ಥಿ ಸಮೂಹ ಬೀದಿಗಿಳಿದು ಹೋರಾಟ ನಡೆಸುವಂತಹ ಪರಿಸ್ಥಿತಿ ಸಂಭವಿಸೀತು. ವಿದ್ಯಾರ್ಥಿಗಳ ಬದುಕು ಮತ್ತು ಭವಿಷ್ಯದ ಬಗ್ಗೆ ಸರ್ಕಾರ ಮತ್ತು ಶೈಕ್ಷಣಿಕ ಸ್ವಾಯತ್ತ ಸಂಸ್ಥೆಗಳು ವ್ಯವಸ್ಥೆಯಲ್ಲಿ ತುಂಬಿ ತುಳುಕಿರುವ ಕೊಳಕನ್ನು ಹೊರಗೆ ತೆಗೆಯಲು ಆಸಕ್ತಿ ಮತ್ತು ಕಾಳಜಿಯನ್ನು ತೋರುವುದು ಈ ಕ್ಷಣದ ಅನಿವಾರ್ಯತೆಯೂ ಹೌದು.


