ಹನೂರು ಅರಣ್ಯದಲ್ಲಿ ಸಿಬ್ಬಂದಿಯ ಬಂದೂಕಿಗೆ ಮೂವರು ಬಲಿಯಾಗಿರುವುದು ನಿಜಕ್ಕೂ ದುರಂತದ ಸಂಗತಿ. ಅದರ ಬಗ್ಗೆ ಪೊಲೀಸರ ತನಿಖೆ ಮತ್ತು ಮ್ಯಾಜಿಸ್ಟ್ರೇಟ್ ವಿಚಾರಣೆ ಕಾನೂನು ಬದ್ಧವಾಗಿ ನಡೆಯುತ್ತದೆ. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ಇದು ಅರಣ್ಯ ಸಂರಕ್ಷಕರ ಮನೋಬಲವನ್ನು ಕುಂದಿಸುವುದಕ್ಕೆ ಕಾರಣವಾಗಬಾರದು. ಈಗ ನಡೆದಿರುವ ಸ್ಥಳವನ್ನು ನೋಡಿದರೆ ವೀರಪ್ಪನ್ ಹೋದರೂ ಅವರ ಹಿಂಬಾಲಕರು ಇನ್ನೂ ಉಳಿದುಕೊಂಡಿದ್ದಾರೆ ಎಂಬ ಲಕ್ಷಣಗಳು ಕಂಡು ಬರುತ್ತಿವೆ. ಇದರ ಬಗ್ಗೆ ಎಚ್ಚರವಹಿಸುವುದು ಅಗತ್ಯ.
ಮಲೆಮಹದೇಶ್ವರ ಬೆಟ್ಟದ ಸಮೀಪ ಇರುವ ಹನೂರು ಸುತ್ತಮುತ್ತ ಕಾಡಿದೆ. ಅಲ್ಲಿ ವಾಸಿಸುವ ಬಹುತೇಕ ಜನ ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಅಲ್ಲೇ ತಿನ್ನುವುದು ರೂಢಿ. ಈ ವಿಷಯದಲ್ಲಿ ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯ ನಡುವೆ ಘರ್ಷಣೆಗಳು ನಡೆಯುತ್ತಿರುತ್ತವೆ. ಹೀಗಾಗಿ ಅಲ್ಲಿಯ ಜನರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಪರಿಚಯಸ್ಥರೇ ಆಗಿರುತ್ತದೆ. ಸ್ಥಳೀಯ ದ್ವೇಷ ಈ ಹತ್ಯೆಗೆ ಕಾರಣವಿರಬಹುದು.
ಅರಣ್ಯ ಕಾಯ್ದೆಯಂತೆ ಯಾರೂ ಪೂರ್ವಾನುಮತಿಇಲ್ಲದೆ ಪ್ರವೇಶಿಸುವಂತಿಲ್ಲ. ಈ ಪ್ರದೇಶವೆಲ್ಲ ವೀರಪ್ಪನ್ ಕಾರ್ಯಾಚರಣೆಗೆ ಒಳಪಟ್ಟಿತ್ತು ಎಂಬುದನ್ನು ಮರೆಯುವಂತಿಲ್ಲ. ಅರಣ್ಯದೊಳಗೆ ಅರಣ್ಯಾಧಿಕಾರಿಗಳು ರಾಜರು. ಅವರನ್ನು ಯಾರೂ ಪ್ರಶ್ನಿಸಲು ಬರುವುದಿಲ್ಲ. ಹಿಂದೆ ಚಾಮರಾಜನಗರದ ಕಾಡಿನಲ್ಲಿ ಕಾಡು ಮೊಲ ಬೇಟೆಯಾಗಲು ಹೋಗಿ ಅಂದಿನ ವಿಭಾಗಾಧಿಕಾರಿ ಐಎಎಸ್ ಮುನಿಸ್ವಾಮಿ ಅವರನ್ನು ಡಿಎಫ್‌ಓ ಆಗಿದ್ದ ಶ್ರೀನಿವಾಸ್ ಬಂಧಿಸಿ ಜೈಲಿನಲ್ಲಿಟ್ಟಿದ್ದರು. ರಾಜ್ಯದಾದ್ಯಂತ ಈ ಹಗರಣ ಚರ್ಚೆಗೆ ಕಾರಣವಾಗಿತ್ತು. ಆಗಲೂ ಶ್ರೀನಿವಾಸ್ ಕ್ರಮವನ್ನು ಸರ್ಕಾರ ಖಂಡಿಸಲಿಲ್ಲ.
ಅರಣ್ಯ ಅಧಿಕಾರಿಗಳು ಸ್ವರಕ್ಷಣೆಗೆ ಮಾತ್ರ ಬಂದೂಕು ಬಳಸಬಹುದು ಎಂದು ಹೇಳಿದ್ದರಿಂದ ವೀರಪ್ಪನ್ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಪ್ರತ್ಯೇಕ ಕಾರ್ಯಪಡೆಯನ್ನು ರಚಿಸಿತ್ತು. ಈ ಕಾರ್ಯಪಡೆಯಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು. ಪೊಲೀಸರಿಗೆ ಬಂದೂಕು ಬಳಸಲು ಅವಕಾಶವಿದೆ. ಅವರಿಗೂ ಕೆಲವು ನಿರ್ಬಂಧವಿದೆ. ಮೊದಲು ಗಾಳಿಯಲ್ಲಿ ಗುಂಡು ಹಾರಿಸಬೇಕು. ನಂತರ ಕಾಲಿಗೆ ಹೊಡೆಯಬೇಕು ಎಂದು ನಿಯಮ ಹೇಳುತ್ತದೆ. ಪ್ರಮುಖ ಸಮಸ್ಯೆ ಎಂದರೆ ಕಾಡಿನಲ್ಲಿ ಎಲ್ಲದ್ದಕ್ಕೂ ಸಾಕ್ಚ್ಯ ತರುವುದು ಕಷ್ಟ. ಹೀಗಾಗಿ ಅರಣ್ಯದಲ್ಲಿ ಬೇಟೆಯಾಡಿದವರನ್ನು ಬಂಧಿಸಿದರೂ ಅವರಿಗೆ ನ್ಯಾಯಾಲಯದಲ್ಲಿ ಸುಲಭವಾಗಿ ಜಾಮೀನು ಸಿಗುತ್ತದೆ. ಕೆಲವು ಬಾರಿ ಅರಣ್ಯ ಇಲಾಖೆ ಸಿಬ್ಬಂದಿ ಆತುರದ ಕ್ರಮಗಳನ್ನು ಕೈಗೊಂಡು ಸಿಕ್ಕಿಬೀಳುತ್ತಾರೆ. ಇದನ್ನು ಕೊಲೆ ಎನ್ನಲು ಬರುವುದಿಲ್ಲ. ಆದರೆ ಅತಿರೇಕದ ಕ್ರಮ. ಇದಕ್ಕೆ ಯಾವುದೇ ದುರುದ್ದೇಶ ಇರುವುದಿಲ್ಲ. ಅಧಿಕಾರದ ದುರುಪಯೋಗ. ಸತ್ತವರು ಅಮಾಯಕರೇನಲ್ಲ. ಬೇಟೆಗಾರರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
ಸಾಮಾನ್ಯವಾಗಿ ಅವರು ಬಳಸುವ ಆಯುಧಗಳು ಕೂಡ ಸ್ಥಳೀಯ. ಅದರಲ್ಲಿ ಪ್ರಾಣಿಗಳನ್ನು ಕೊಲ್ಲಬಹುದೇ ಹೊರತು ಮನುಷ್ಯರನ್ನಲ್ಲ. ಹೀಗಾಗಿ ಈ ಘಟನೆ ನಡೆದಿರುವುದು ದುರ್ದೈವ. ಆ ಪ್ರದೇಶದಲ್ಲಿ ವನ್ಯಜೀವಿಗಳ ರಕ್ಷಣೆ ಕಷ್ಟದ ಕೆಲಸ. ಅದರಲ್ಲೂ ತಮಿಳುನಾಡು ಗಡಿಯಲ್ಲಿ ಬಹುತೇಕ ಜನ ಅರಣ್ಯ ಸಂಪತ್ತಿನ ಲೂಟಿಯಲ್ಲಿ ಭಾಗಿಯಾದವರು. ವೀರಪ್ಪನ್ ಹೋದ ಮೇಲೆ ಸಣ್ಣಪುಟ್ಟ ಪ್ರಾಣಿಗಳ ಬೇಟೆಯಾಡುವವರು ಈಗಲೂ ಇದ್ದಾರೆ. ಅವರ ಬಳಿ ಪೊಲೀಸರು ಹೋಗುವುದೇ ಕಷ್ಟ. ಅರಣ್ಯ ರಕ್ಷಣೆಯಲ್ಲಿ ಸ್ಥಳೀಯರ ಸಹಕಾರ ಅಗತ್ಯ. ಅವರಿಗೆ ಬೇರೆ ಯಾವುದೇ ಕೆಲಸ ಇರುವುದಿಲ್ಲ. ಅವರು ಜಿಂಕೆ ಕೊಂಬು, ಚರ್ಮ ಮಾರಾಟ ಮಾಡುತ್ತಾರೆ. ಇದು ಕಾನೂನು ಪ್ರಕಾರ ಅಪರಾಧ. ಇದರಲ್ಲಿ ಮಾನವೀಯತೆಗೆ ಅವಕಾಶವಿಲ್ಲ. ಒಂದು ಕಡೆ ಅರಣ್ಯ ಮತ್ತೊಂದು ಕಡೆ ಸ್ಥಳೀಯರು. ಇಬ್ಬರ ರಕ್ಷಣೆಯೂ ಸರ್ಕಾರದ್ದೇ. ಈ ಹಗರಣದಲ್ಲಿ ಯಾರದು ತಪ್ಪು ಎಂಬುದು ಸ್ವತಂತ್ರ ತನಿಖೆಯಿಂದ ಮಾತ್ರ ತಿಳಿಯುತ್ತದೆ.


