Menu

ರಾಜ್ಯದಲ್ಲಿ ಬರ, ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಕೇಂದ್ರಕ್ಕೆ ಮನವಿ: ಡಿಸಿಎಂ ಪರಮೇಶ್ವರ್‌

ಬರದಿಂದ ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಇದೆ. ರಾಷ್ತ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.

ಚಿತ್ರದುರ್ಗ  ನಗರದ ಹೊರ ವಲಯದ ಮುರುಘಾ ಮಠದ ಸಭಾಂಗಣದಲ್ಲಿ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದರು. ಸೂಪರ್ ಎಲ್ ನಿನೋ ಪರಿಣಾಮದಿಂದ ರಾಜ್ಯದ ಬಹಳಷ್ಟು ಜಲಾಶಯ ಗಳು ಡೆಡ್ ಸ್ಟೋರೇಜ್ ತಲುಪಿವೆ. ಬೆಂಗಳೂರು ವಿಭಾಗದ ಜಿಲ್ಲೆಗಳಲ್ಲಿ ಶೇ. -37 (ಋಣಾತ್ಮಕ) ಮಳೆಯಾಗಿದೆ. ಕಳೆದ 75 ವರ್ಷಗಳಲ್ಲಿ 25 ವರ್ಷ ಎಲ್ ನಿನೋ ಪರಿಣಾಮವನ್ನು ದೇಶ ಎದುರಿಸಿದೆ ಎಂದರು.

ಬೆಂಗಳೂರು ವಿಭಾಗದ ಜಿಲ್ಲೆಗಳಲ್ಲಿ ಒಟ್ಟು 13.73 ಲಕ್ಷ ಹೆಕ್ಟೇರ್ ಬಿತ್ತನೆ ಆಗಬೇಕಿತ್ತು.  ಮಳೆಯಾಗದ ಕಾರಣ ಕೇವಲ 1.74 ಲಕ್ಷ ಹೆ. ನಷ್ಟು ಮಾತ್ರ ಬಿತ್ತನೆಯಾಗಿರುವುದು, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯನ್ನು ಬಿಂಬಿಸುತ್ತದೆ. ರಾಜ್ಯದ ಕೆರೆಗಳಲ್ಲಿ ನೀರಿಲ್ಲ, ಕೆರೆಗಳಲ್ಲೂ ನೀರಿಲ್ಲ, ಅಂತರ್ಜಲ ಕುಸಿದಿದೆ. ರಾಜ್ಯದಲ್ಲಿ ಬಹಳಷ್ಟು ಗ್ರಾಮ, ಪಟ್ಟಣಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಬಂದಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳು ಕುಡಿಯುವ ನೀರು ಸರಬರಾಜು ಕಾರ್ಯಕ್ಕಾಗಿಯೇ ಪ್ರತಿ ಜಿಲ್ಲೆಗೆ 5 ಕೋಟಿ ರೂ. ಅನುದಾನ ಕೊಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂ. ನೀಡಲು ಕ್ರಮ ಆಗಿದೆ. ಆಯಾ ಶಾಸಕರು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ, ಪರಿಸ್ಥಿತಿಯ ಪರಾಮರ್ಶೆ ನಡೆಸಿ ಜನರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿಡಿದ್ದಾರೆ ಎಂದರು.

ಕುಡಿಯುವ ನೀರು, ಮೇವು, ಉದ್ಯೋಗ ನೀಡಲು ಯಾವುದೇ ಹಣದ ಕೊರತೆ ಇಲ್ಲ.  ರಾಜ್ಯದಲ್ಲಿನ ಜಾನುವಾರು ಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ಪಶುಸಂಗೋಪನೆ ಇಲಾಖೆ ಮೇವು ಸಂಗ್ರಹ ಹಾಗೂ ಪೂರೈಕೆ ಬಗ್ಗೆ ನಿಗಾ ವಹಿಸಬೇಕು. ನೀರು ಲಭ್ಯ ಇರುವೆಡೆ ಮೇವು ಬೆಳೆಯಲು ಮೆವಿನ ಬೀಜದ ಕಿಟ್ ವಿತರಿಸಬೇಕು ಎಂದು ಡಿಸಿಎಂ  ಸೂಚನೆ ನೀಡಿದರು.

ರಾಜ್ಯದ ಬಾಗಲಕೋಟೆ, ಬಿಜಾಪುರ, ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ ಜನ ಕೆಲಸ ಅರಸಿಕೊಂಡು ಗುಳೇ ಹೋಗುತ್ತಿರುವ ಬಗ್ಗೆ ಕೇಳಿ ಬಂದಿದೆ. ಇದನ್ನು ತಡೆಗಟ್ಟಿ, ಕೂಲಿ ಕಾರ್ಮಿಕರಿಗೆ ವಿ.ಬಿ.ಜಿ.ರಾಮ್ ಜಿ ಯೋಜನೆಯಡಿ ಸ್ಥಳೀಯವಾಗಿಯೇ ಕೆಲಸ ನೀಡಬೇಕು. ಇದಕ್ಕೆ ನಾವೇ ಹಣ ಕೊಡುತ್ತೇವೆ. ಕುಡಿಯುವ ನೀರು, ಮೇವು, ಉದ್ಯೋಗ ನೀಡಲು ಯಾವುದೇ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬರ ಪೀಡಿತ ಎಂದು ಘೋಷಿಸುವ ನಿಟ್ಟಿನಲ್ಲಿ ರಾಜ್ಯದ ಗಂಭೀರ ಪರಿಸ್ಥಿತಿ ಯ ವಿವರಗಳೊಂದಿಗೆ ಈಗಾಗಲೇ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಗಳಿಗೆ ಪತ್ರ ಬರೆದಿದ್ದಾರೆ. ನಾವು ಕೂಡ ಕೇಂದ್ರ ಗೃಹ ಹಾಗೂ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಬರ ಪರಿಸ್ಥಿತಿ ಘೋಷಣೆಗೆ ಕೇಂದ್ರ  ಸರ್ಕಾರ 10 ಮಾನದಂಡಗಳನ್ನು ನಿಗದಿಪಡಿಸಿದೆ.  ರಾಜ್ಯದ ಈಗಿನ ಗಂಭೀರ ಬರ ಪರಿಸ್ಥಿತಿಯನ್ನು ಅವಲೋಕಿಸಿ, ಮಾನದಂಡಗಳನ್ನು ಸಡಿಲಿಸಿ, ವಿನಾಯಿತಿ ನೀಡಿ, ಬರ ಪರಿಹಾರಕ್ಕಾಗಿ ಅನುದಾನ ನೀಡುವಂತೆ ಹಾಗೂ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲು ಮನವಿ ಮಾಡಲಾಗಿದೆ. ಆದರೆ ಇದಕ್ಕೆ ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಪರಮೇಶ್ವರ್‌ ತಿಳಿಸಿದರು.

Related Posts

Leave a Reply

Your email address will not be published. Required fields are marked *