ಕಪ್ಪು ಸಮುದ್ರದಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗೊಂದರ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಪ್ರಜೆ ಮೃತಪಟ್ಟಿದ್ದಾರೆ. ಜುಲೈ 18 ರಂದು ರಷ್ಯಾದ ಪ್ರಾದೇಶಿಕ ಜಲಪ್ರದೇಶದಲ್ಲಿ ಚಲಿಸುತ್ತಿದ್ದ ಎಂವಿ ಒಮೊರ್ಫಿ ಎಂಬ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ಈ ದಾಳಿ ನಡೆದಿದೆ.
ಹಡಗಿನಲ್ಲಿ ಒಟ್ಟು ಹತ್ತು ಸಿಬ್ಬಂದಿ ಇದ್ದರು. ಅವರಲ್ಲಿ ಮೂವರು ಭಾರತೀಯರು. ಒಬ್ಬ ಭಾರತೀಯ ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಸುರಕ್ಷಿತವಾಗಿದ್ದಾರೆ.
ಈ ದಾಳಿಯನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಂಡಿಸಿದೆ. ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಜಾಗತಿಕ ಮುಕ್ತ ವ್ಯಾಪಾರ ಮತ್ತು ಹಡಗು ಸಂಚಾರದ ಭದ್ರತೆಗೆ ದೊಡ್ಡ ಬೆದರಿಕೆ ಎಂದು ಕಳವಳ ವ್ಯಕ್ತಪಡಿಸಿದೆ.
ಇರಾನ್ ಜಲಪ್ರದೇಶದಲ್ಲಿ ಎಲ್‌ಪಿಜಿ ಟ್ಯಾಂಕರ್ ಮೇಲೆ ದಾಳಿ
ಇರಾನ್ ಜಲ ಪ್ರದೇಶದಲ್ಲಿ ೨೮ ಭಾರತೀಯ ಸಿಬ್ಬಂದಿಯಿದ್ದ ಎಲ್‌ಪಿಜಿ ಟ್ಯಾಂಕರ್ ಮೇಲೆ ದಾಳಿ ನಡೆದಿದೆ. ಮೊಜಾಂಬಿಕ್ ಧ್ವಜವಿದ್ದ ಎಲ್‌ಪಿಜಿ ಟ್ಯಾಂಕರ್ ದಿಶಾದಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಮತ್ತು ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ರಾಯಭಾರ ಕಚೇರಿ ತಿಳಿಸಿದೆ. ದಾಳಿಯ ಸ್ವರೂಪ ಅಥವಾ ಹಡಗಿನ ಸ್ಥಿತಿಗತಿ ವಿವರ ನೀಡಿಲ್ಲ.


