Menu

ಅಮೆರಿಕದ ಬೆದರಿಕೆ: ಪ್ರಬಲ ಪ್ರತೀಕಾರದ ಎಚ್ಚರಿಕೆಯಿತ್ತ ಇರಾನ್‌

ಇರಾನ್‌ ಅನ್ನು ಸರ್ವ ನಾಶ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆಗೆ ಇರಾನ್‌ ಖಡಕ್‌ ಆಗಿ ಪ್ರತಿಕ್ರಿಯಿಸಿದ್ದು, ತನ್ನ ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ನಡೆಸಿದರೆ ಅದೇ ರೀತಿಯ ಪ್ರಬಲ ಪ್ರತಿದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಹರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದರೆ ಇರಾನ್‌ನ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳಂತಹ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗುವುದು ಎಂದು ಅಮೆರಕ ವಾರ್ನ್‌ ಮಾಡಿದ ಬಳಿಕ ಇರಾನ್‌ ಈ ಹೇಳಿಕೆ ಪ್ರಕಟಿಸಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ನಮ್ಮ ರಕ್ಷಣಾ ಸಿದ್ಧಾಂತ ಸ್ಪಷ್ಟವಾಗಿದೆ. ಕಣ್ಣಿಗೆ ಕಣ್ಣು. ಇರಾನ್ ಅಥವಾ ಅದರ ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ ಪ್ರಬಲ ಮತ್ತು ನಿರ್ಣಾಯಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಗರ್ ಖಾಲಿಬಾಫ್ ಕಠಿಣ ಎಚ್ಚರಿಕೆ ನೀಡಿ, ಇರಾನ್‌ಗೆ ತೈಲ ಮಾರಾಟಕ್ಕೆ ಅವಕಾಶ ನೀಡದಿದ್ದರೆ, ಈ ಪ್ರದೇಶದ ಯಾವುದೇ ದೇಶಕ್ಕೂ ತೈಲ ಮಾರಾಟ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಹರ್ಮುಜ್ ಜಲಸಂಧಿಯ ಪರಿಸ್ಥಿತಿ ಯುದ್ಧಕ್ಕೂ ಮುಂಚಿನ ಸ್ಥಿತಿಗೆ ಮರಳುವುದಿಲ್ಲ ಹಾಗೂ ಈ ಪ್ರದೇಶದಲ್ಲಿ ಅಮೆರಿಕದ ಸೇನಾ ಉಪಸ್ಥಿತಿ ಇಲ್ಲದಿದ್ದಾಗ ಮಾತ್ರ ನಿಜವಾದ ಭದ್ರತೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇರಾನ್‌ನಲ್ಲಿ ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಕೈಜೋಡಿಸಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಮೆಹ್ದಿ ಖಾನಾಕಿ ಎಂಬಾತನಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿದೆ. ಇರಾನ್ ಅಧಿಕಾರಿಗಳ ಪ್ರಕಾರ, ಮೆಹ್ದಿ ಖಾನಾಕಿ 2023ರಲ್ಲಿ ಇಸ್ರೇಲ್ ಬೆಂಬಲಿತ ಎಂದು ಹೇಳಲಾಗುತ್ತಿರುವ ಹೆಸರನ್ನು ಬಹಿರಂಗಪಡಿಸದ ಶಸ್ತ್ರಸಜ್ಜಿತ ವಿರೋಧಿ ಸಂಘಟನೆಯೊಂದನ್ನು ಸೇರಿ ಇರಾನ್ ಸರ್ಕಾರದ ವಿರುದ್ಧ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಗುಪ್ತಚರ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಕರಾಜ್ ನಗರದಲ್ಲಿ ಖಾನಾಕಿಯನ್ನು ಬಂಧಿಸಲಾಗಿತ್ತು. ಬಂದೂಕುಗಳು, ಮದ್ದುಗುಂಡುಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *