ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭಗೊಂಡಿದ್ದು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಯಲ್ಲಿ ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ತಿದ್ದುಪಡಿ ಮಸೂದೆ, 2026’ ಮಂಡಿಸಿದ್ದಾರೆ. ಮಸೂದೆಯು 1956 ರ ಸುಪ್ರೀಂ ಕೋರ್ಟ್ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 34 ರಿಂದ 38 ಕ್ಕೆ ಏರಿಕೆಯಾಗಲಿದೆ.
ಈ ಹಿಂದೆ ಕೇಂದ್ರ ಸಚಿವ ಸಂಪುಟವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿತ್ತು. ರಾಷ್ಟ್ರಪತಿ ಈ ಕುರಿತು ವಿಶೇಷ ಸುಗ್ರೀವಾಜ್ಞೆ ಹೊರಡಿಸಿದ್ದರು. ಈಗ ಶಾಶ್ವತ ಕಾಯ್ದೆ ತರಲು ಈ ಮಸೂದೆಯನ್ನು ಪರಿಚಯಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಸೇರಿದಂತೆ 32 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡರೆ ಇದು 38 ಕ್ಕೆ ಏರಿಕೆಯಾಗಲಿದೆ.
ಈ ಹಿಂದೆ 2019 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 31 ರಿಂದ 34 ಕ್ಕೆ ಹೆಚ್ಚಿಸಲಾಗಿತ್ತು. ಏಳು ವರ್ಷಗಳ ನಂತರ ಮತ್ತೆ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಸಂಸತ್ತಿನಲ್ಲಿ ಸರಳ ಬಹುಮತ ದೊರೆತರೆ ಈ ಮಸೂದೆ ಕಾಯ್ದೆಯಾಗುತ್ತದೆ.
ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾಗುವುದರಿಂದ ಹೆಚ್ಚಿನ ಪೀಠಗಳನ್ನು ರಚನೆಗೆ ಅವಕಾಶವಾಗಿ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಾಮಾನ್ಯ ನಾಗರಿಕರ ಅರ್ಜಿಗಳು ಮತ್ತು ಪ್ರಮುಖ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥಗೊಳ್ಳಲಿವೆ.


