Menu

ಕೃಷಿ, ನೀರಾವರಿ ಯೋಜನೆಗಳಿಗೆ ಹೋರಾಟ ಮಾಡಿದ ನಾಯಕ ಹೆಚ್‌. ಹನುಮಂತಪ್ಪ: ಸಿಎಂ 

ನಮ್ಮ ಹಿರಿಯ ನಾಯಕರಾದ ಹನುಮಂತಪ್ಪ ಅವರ ದೇಹ ನಮ್ಮ ಜೊತೆ ಇಲ್ಲದಿರಬಹುದು, ಆದರೆ ಅವರ ಕೆಲಸಗಳು, ಆಚಾರ ವಿಚಾರಗಳು ಶಾಶ್ವತವಾಗಿ ಉಳಿಯಲಿವೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದರು.

ಚಿತ್ರದುರ್ಗದಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಹೆಚ್. ಹನುಮಂತಪ್ಪ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಮಾಧ್ಯಮಗಳ ಜತೆ ಮಾತನಾಡಿದರು.  1979ರಿಂದ ನಾನು ಹೆಚ್ ಹನುಮಂತಪ್ಪ ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದೆ. ನಾವು ವಿದ್ಯಾರ್ಥಿ ನಾಯಕರಾಗಿದ್ದಾಗ ಅಕ್ಕಪಕ್ಕದ ರೂಮ್ ಗಳಲ್ಲೇ ಇದ್ದೆವು. ರಾಜಗೋಪಾಲ್, ಜಾಫರ್ ಷರೀಫ್ ಅವರು ನಮ್ಮ ಜಿಲ್ಲೆಯಿಂದಲೇ ರಾಜಕಾರಣ ಮಾಡಿದರು. ಹನುಮಂತಪ್ಪ ಅವರಿಗೆ ಎಲ್ಲಾ ವರ್ಗದ ಜನರ ಬಗ್ಗೆ ಕಾಳಜಿ ಇತ್ತು. ಇಂದು ಅವರ ದೇಹಕ್ಕೆ ಸಾವು ಬಂದಿರಬಹುದು. ಅವರ ಆಚಾರ ವಿಚಾರ, ಭಾವನೆಗಳು ಜೀವಂತವಾಗಿರುತ್ತವೆ. ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಮಾರ್ಗದರ್ಶನ ನೀಡಿದ್ದರು. ಚಿತ್ರದುರ್ಗದ ಕೃಷಿ ಹಾಗೂ ನೀರಾವರಿಯ ಅನೇಕ ಯೋಜನೆಗಳಿಗೆ ಹೋರಾಟ ಮಾಡಿದವರು ಎಂದು ಸ್ಮರಿಸಿದರು.

ಅವರು ನಮ್ಮ ಆತ್ಮೀಯ ನಾಯಕರಾಗಿದ್ದು ಅವರಿಗೆ ಗೌರವ ಸಲ್ಲಿಸಿದ್ದೇವೆ. ಸರಳ ಜೀವನ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಹೆಜ್ಜೆ ಇಟ್ಟವರು ಹನುಮಂತಪ್ಪನವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ರಾಜಕಾರಣದಲ್ಲಿ ಬೇಕಾದಷ್ಟು ನಾಯಕರಿಗೆ ನೆರವು ನೀಡಿದ್ದಾರೆ ಎಂದರು.

ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ತರುವ ವಿಚಾರವಾಗಿ ಹನುಮಂತಪ್ಪ ಅವರು ಹೋರಾಟ ಮಾಡಿದ್ದರು ಎಂದು ಕೇಳಿದಾಗ, ಕೇವಲ ಭದ್ರಾ ಮೇಲ್ದಂಡೆ ಯೋಜನೆ ಮಾತ್ರವಲ್ಲ. ಅನೇಕ ನೀರಾವರಿ ಯೋಜನೆಗಳಿಗೆ ಹೋರಾಟ ಮಾಡಿದ್ದಾರೆ. ಸರ್ಕಾರದ ಮಟ್ಟದಲ್ಲಿ, ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ. ಅವರು ಜಿಲ್ಲೆಯಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಉತ್ತರಿಸಿದರು.

ಬರ ಪರಿಸ್ಥಿತಿ ಎದುರಾಗಿರುವ ಬಗ್ಗೆ ಕೇಳಿದಾಗ, ಈ ವಿಚಾರವಾಗಿ ಕಂದಾಯ ಸಚಿವರಾಗಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಜೊತೆ ಚರ್ಚೆ ಮಾಡುತ್ತೇನೆ. ಬೆಂಗಳೂರು ವಿಭಾಗ ಮಟ್ಟದ ಸಭೆ ಯಾವಾಗ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *