ಸಾಂಪ್ರದಾಯಿಕ ಕೃಷಿಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯವನ್ನು ಆಧರಿಸಿ ರಾಜ್ಯದ ರೈತರಿಗೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮೂಲಕ ಪ್ರಮಾಣಪತ್ರ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ‘ಒಂದು ಜಗತ್ತು ಒಂದು ಕುಟುಂಬ’ ಮಾನವೀಯ ಸೇವಾ ಅಭಿಯಾನದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.
ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ‘ಸುಭಿಕ್ಷಾ ಆರ್ಗಾನಿಕ್ ಫಾರ್ಮರ್ಸ್ ಸೊಸೈಟಿ’ ಮತ್ತು ‘ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್’ ಸಂಯುಕ್ತವಾಗಿ ಆಯೋಜಿಸಿದ್ದ ಸಾವಯವ ರಾಗಿ ಬೆಳೆಗಾರರ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
ಜುಲೈ 29ರ ಗುರುಪೂರ್ಣಿಮೆಯಂದು ಮೊದಲ ಹಂತದಲ್ಲಿ 140 ರೈತರಿಗೆ ಪ್ರಮಾಣಪತ್ರ ವಿತರಿಸಲಾಗುವುದು. ಇಂತಹದೊಂದು ಪ್ರಯೋಗ ದೇಶದಲ್ಲಿ ಇದೇ ಮೊದಲು. ಅನ್ನದಾತನಿಗೆ ಗೌರವ ನೀಡುವುದೇ ಈ ಯೋಜನೆಯ ಉದ್ದೇಶ ಎಂದು ಹೇಳಿದರು.
ತಲೆತಲಾಂತರಗಳಿಂದ ಬಂದ ಕೃಷಿ ಜ್ಞಾನದ ಮೂಲಕ ದೇಶಕ್ಕೆ ಅನ್ನ ನೀಡುತ್ತಿರುವ ರೈತರನ್ನು ಸಮಾಜ ಗೌರವಿಸುವ ಕಾಲ ಬಂದಿದೆ ಎಂದು ಹೇಳಿದ ಸದ್ಗುರು, ವೈದ್ಯರು, ಶಿಕ್ಷಕರು, ಎಂಜಿನಿಯರ್‌ಗಳನ್ನು ‘ನಾಲೆಜ್ ಎಕಾನಮಿ’ಯ ಭಾಗವಾಗಿ ಪರಿಗಣಿಸುವ ಸಮಾಜ, ರೈತರನ್ನು ಮಾತ್ರ ‘ಲೇಬರ್ ಎಕಾನಮಿ’ಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
“ರೈತರಿಗೆ ಜ್ಞಾನವಿಲ್ಲವೇ? ಅವರ ಸಾಂಪ್ರದಾಯಿಕ ಜ್ಞಾನ ಮತ್ತು ಕೌಶಲ್ಯಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಯೋಜನೆ ರೂಪಿಸಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ರೈತರ ಜ್ಞಾನ ಮತ್ತು ಅನುಭವಕ್ಕೆ ಮಾನ್ಯತೆ ನೀಡುವ ಪ್ರಯತ್ನ ಇದಾಗಿದೆ” ಎಂದು ಹೇಳಿದರು.
ಈಗಾಗಲೇ 180 ರೈತರಿಗೆ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 140 ಮಂದಿ ಅರ್ಹತೆ ಪಡೆದಿದ್ದಾರೆ. ರೈತರ ಪಾರಂಪರಿಕ ಕೃಷಿಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯದ ಮೌಲ್ಯಮಾಪನದ ಆಧಾರದ ಮೇಲೆ ಪ್ರಮಾಣಪತ್ರ ನೀಡಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ರೈತರನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು ಎಂದು ತಿಳಿಸಿದರು.
ಇತರ ವಿಶ್ವವಿದ್ಯಾಲಯಗಳಲ್ಲಿ 3-4 ವರ್ಷಗಳ ಕೋರ್ಸ್ ಪೂರ್ಣಗೊಳಿಸಿದ ಬಳಿಕ ಪ್ರಮಾಣಪತ್ರ ಸಿಗುತ್ತದೆ. ಆದರೆ ನಾವು ರೈತರಲ್ಲಿ ಈಗಾಗಲೇ ಇರುವ ಜ್ಞಾನವನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ಇದರಿಂದ ರೈತರಿಗೆ ತಕ್ಕ ಸ್ಥಾನಮಾನ ಮತ್ತು ಆತ್ಮವಿಶ್ವಾಸ ದೊರೆಯಲಿದೆ ಎಂದು ಸದ್ಗುರು ತಿಳಿಸಿದರು.
ಎರಡು ಕೋಟಿ ಮಕ್ಕಳಿಗೆ ಸಾಯಿ ಶ್ಯೂರ್ ಗುರಿ
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮೂಲಕ ರಾಜ್ಯದ ಒಂದು ಕೋಟಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪೌಷ್ಟಿಕ ಆಹಾರ ‘ಸಾಯಿ ಶ್ಯೂರ್’ ವಿತರಿಸಲಾಗುತ್ತಿದ್ದು, ಇದರ ತಯಾರಿಕೆಗೆ ಸಾವಯವ ಪದ್ಧತಿಯಲ್ಲಿ ಬೆಳೆದ ರಾಗಿಯನ್ನು ರೈತರು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಎರಡು ಕೋಟಿ ಮಕ್ಕಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಕಾರ್ಖಾನೆ ಸ್ಥಾಪಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.
ಗುಣಮಟ್ಟದ ರಾಗಿಯನ್ನು ಬೆಳೆಯುವ ರೈತರಿಗೆ ಅಗತ್ಯವಿದ್ದರೆ ನಾವು ಸಾಲ ಮಾಡಿಯಾದರೂ ಹಣ ನೀಡಲು ಸಿದ್ಧ. ನಾವು ಸಾಲ ಮಾಡದಿದ್ದರೆ ರೈತರು ಸಾಲ ಮಾಡಬೇಕಾಗುತ್ತದೆ. ಆದರೆ ರೈತರಿಗೆ ಸಾಲದ ಹೊರೆ ಬೀಳಬಾರದು ಎಂಬುದು ನಮ್ಮ ಆಶಯ ಎಂದು ಹೇಳಿದರು.
‘ಸಾಯಿ ಶ್ಯೂರ್’ ಉತ್ಪನ್ನವನ್ನು ವಿದೇಶಗಳಿಗೂ ರಫ್ತು ಮಾಡುವ ಚಿಂತನೆ ನಡೆಯುತ್ತಿದ್ದು, ಈಗಾಗಲೇ ಶ್ರೀಲಂಕಾ, ಕಾಂಬೋಡಿಯಾ ಮತ್ತು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಮಾತುಕತೆ ಮತ್ತು ಒಪ್ಪಂದಗಳು ನಡೆದಿವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಜೊತೆಗೆ ಸಾವಯವ ಕೃಷಿಯಲ್ಲಿಯೂ ಸದ್ಗುರು ಶ್ರೀ ಮಧುಸೂದನ ಸಾಯಿ ಕ್ರಾಂತಿಕಾರಕ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಅವರು ಈ ನಾಡಿನ ಆಧ್ಯಾತ್ಮಿಕ ಮತ್ತು ಸಿರಿಧಾನ್ಯಗಳ ರಾಯಭಾರಿಯಾಗಿದ್ದಾರೆ. ಉಚಿತ ವೈದ್ಯಕೀಯ ಶಿಕ್ಷಣ ನೀಡುತ್ತಿರುವ ಏಕೈಕ ಸ್ವಾಮೀಜಿ ಎಂದು ನಾನು ವಿಶ್ವದ ಯಾವುದೇ ವೇದಿಕೆಯಲ್ಲಿ ಹೇಳಬಲ್ಲೆ ಎಂದು ಹೇಳಿದರು. ರೈತರ ಶ್ರಮಕ್ಕೆ ಧಾರ್ಮಿಕತೆಯ ಸ್ಪರ್ಶ ನೀಡುವ ಮೂಲಕ ಸದ್ಗುರುಗಳು ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಪರಿವರ್ತನೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಭಿಕ್ಷಾ ಆರ್ಗಾನಿಕ್ ಫಾರ್ಮರ್ಸ್ ಸೊಸೈಟಿಯ ಅಧ್ಯಕ್ಷ ಆನಂದ ಆ.ಶ್ರೀ. ಮಾತನಾಡಿ, ಬೀಜವನ್ನು ಜೀವ ಎಂದು ಕಲಿಸದೇ, ಅದನ್ನು ಕೇವಲ ಸರಕು ಎಂಬಂತೆ ನೋಡುವ ಮನೋಭಾವದಿಂದಲೇ ರಾಸಾಯನಿಕ ಕೃಷಿಗೆ ಉತ್ತೇಜನ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು.
ತಿಪಟೂರು ತಾಲೂಕಿನ ಕೆರೆಗೋಡಿ ರಂಗಾಪುರ ಮಠದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ, ರಾಜ್ಯ ಕೃಷಿ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಡಾ ಕೆ.ರಾಜೇಂದ್ರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ ಎಸ್.ವಿ. ಸುರೇಶ್ ಹಾಗೂ ಪ್ರಶಾಂತ ಬಾಲಮಂದಿರದ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.
8 ಸಾವಿರ ಎಕರೆಯಲ್ಲಿ ಸಾವಯವ ರಾಗಿ ಬೆಳೆ
ಕರ್ನಾಟಕದ ಸರ್ಕಾರಿ ಶಾಲೆಗಳ ‘ಸಾಯಿ ಶ್ಯೂರ್’ ಯೋಜನೆಗೆ ರಾಗಿ ಪೂರೈಸುತ್ತಿರುವ ಸುಮಾರು 2 ಸಾವಿರ ರೈತರು ಸಮಾವೇಶದಲ್ಲಿ ಭಾಗವಹಿಸಿದ್ದರು. “ಮಣ್ಣಿನಿಂದ ಶಾಲೆಗೆ, ಶಾಲೆಯಿಂದ ಸಮಾಜದ ಉನ್ನತಿಗೆ” ಎಂಬ ಪರಿಕಲ್ಪನೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಮಕೂರಿನ ತಿಪಟೂರು, ಹಾಸನದ ಅರಸೀಕೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ತಾವು ಬೆಳೆದ ರಾಗಿ ಬೀಜವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ ಸಾಂಕೇತಿಕವಾಗಿ ಸಮರ್ಪಿಸಿದರು.
ಮೂರು ಜಿಲ್ಲೆಗಳ 2 ಸಾವಿರಕ್ಕೂ ಹೆಚ್ಚು ರೈತರು ಸುಮಾರು 8 ಸಾವಿರ ಎಕರೆಯಲ್ಲಿ ಸಾವಯವ ರಾಗಿ ಬೆಳೆದು ‘ಸಾಯಿ ಶ್ಯೂರ್’ ಯೋಜನೆಗೆ ಪೂರೈಕೆ ಮಾಡುತ್ತಿದ್ದಾರೆ ಎಂದು ಅನ್ನಪೂರ್ಣ ಟ್ರಸ್ಟ್ ಮುಖ್ಯಸ್ಥ ಭರಣಿ ಪ್ರಸಾದ್ ಮಾಹಿತಿ ನೀಡಿದರು.


