ಅಮೆರಿಕದಲ್ಲಿ ಜನಿಸುವ ವಿದೇಶಿ ಮೂಲದ ಮಕ್ಕಳಿಗೆ ಸಿಗುವ ಜನ್ಮಸಿದ್ಧ ಪೌರತ್ವವನ್ನು ರದ್ದುಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶವನ್ನು ವಜಾಗೊಳಿಸಿರುವ ಅಲ್ಲಿನ ಸುಪ್ರೀಂಕೋರ್ಟ್, ಜನ್ಮಸಿದ್ಧ ಪೌರತ್ವ ಹಕ್ಕು ಎತ್ತಿ ಹಿಡಿದಿದೆ.
ಈ ಐತಿಹಾಸಿಕ ತೀರ್ಪು ನಮ್ಮ ದೇಶಕ್ಕೆ ತುಂಬಾ ಕೆಟ್ಟದ್ದು ಮತ್ತು ಮಾರಕ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ದೀರ್ಘ ಮತ್ತು ಸಂಕೀರ್ಣ ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲ. ಕಾಂಗ್ರೆಸ್ ಒಂದು ಸಾಮಾನ್ಯ ಕಾನೂನು ತರುವ ಮೂಲಕ ಬಹಳ ಸುಲಭವಾಗಿ ನಿರ್ವಹಿಸಬಹುದು ಎಂದು ವಾದಿಸಿದ್ದಾರೆ
ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ನೇತೃತ್ವದ 5-4 ನ್ಯಾಯಾಧೀಶರ ಪೀಠವು ಈ ತೀರ್ಪು ನೀಡಿದೆ. ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ, ಯುಎಸ್ ಮಣ್ಣಿನಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ (ಅಕ್ರಮ ವಲಸಿಗರು ಅಥವಾ ತಾತ್ಕಾಲಿಕ ವೀಸಾದಲ್ಲಿರುವವರ ಮಕ್ಕಳೂ ಸೇರಿ) ಪೌರತ್ವದ ಹಕ್ಕಿದೆ ಎಂದು ಕೋರ್ಟ್ ಹೇಳಿದೆ.
ಅಮೆರಿಕದಲ್ಲಿ ಜನಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೆಲವೇ ಕೆಲವು ಅಪರೂಪದ ವಿನಾಯಿತಿಗಳನ್ನು ಹೊರತುಪಡಿಸಿ ಅಮೆರಿಕದ ನಾಗರಿಕ ಎಂಬ ನಿಯಮ ಹಲವು ದಶಕಗಳಿಂದ ಜಾರಿಯಲ್ಲಿದ್ದು, ಅದನ್ನು ಕಾರ್ಯನಿರ್ವಾಹಕ ಆದೇಶದ ಮೂಲಕ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಜನ್ಮಸಿದ್ಧ ಪೌರತ್ವವು ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯಿಂದ ನೀಡಲಾಗಿರುವ ಮೂಲಭೂತ ಹಕ್ಕು. ಕಾಂಗ್ರೆಸ್ ಕಾನೂನು ತರುವ ಮೂಲಕ ರದ್ದುಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಲೇಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ ದೇಶದಲ್ಲಿ ಜನಿಸುವ ಮಕ್ಕಳು ನಾಗರಿಕರಾಗುತ್ತಾರೆ. ಇದನ್ನು ಬದಲಾಯಿಸಬೇಕಾದರೆ ಕಡ್ಡಾಯವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಸಂವಿಧಾನ ತಿದ್ದುಪಡಿ ಕಠಿಣ ಪ್ರಕ್ರಿಯೆಯಾಗಿದ್ದು, ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಸ್ಪಷ್ಟಪಡಿಸಿದ್ದಾರೆ.
2025 ರಲ್ಲಿ ಟ್ರಂಪ್ ಸಹಿ ಮಾಡಿದ್ದ ಈ ಆದೇಶ ಜಾರಿಯಾಗಿದ್ದರೆ, ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಗ್ರೀನ್ ಕಾರ್ಡ್ ಆಕಾಂಕ್ಷಿಗಳಿಗೆ ಬಹುದೊಡ ಸಮಸ್ಯೆಯಾಗುತ್ತಿತ್ತು.


