Menu

ಡಿಜಿಟಲ್ ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 17 ಲಕ್ಷ ರೂ. ವಂಚನೆ, 12 ಮಂದಿ ಅರೆಸ್ಟ್‌

ಡಿಜಿಟಲ್ ಕ್ರಿಪ್ಟೋ ಕರೆನ್ಸಿಗೆ ಭಾರತೀಯ ರೂಪಾಯಿಯನ್ನು ಪರಿವರ್ತಿಸಿ ವಿದೇಶದಿಂದ ಕಡಿಮೆ ಬೆಲೆಗೆ ವಸ್ತುನ್ನು ಖರೀದಿಸಿ ಕೊಡುವುದಾಗಿ ನಂಬಿಸಿ 17.64 ಲಕ್ಷ ರೂಪಾಯಿ ದೋಚಿದ ಪ್ರಕರಣವನ್ನು ಸಂಜಯನಗರ ಪೊಲೀಸರು ಬಹಿರಂಗಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಶ್ಮೀರ ಯುವಕರು ಸೇರಿದಂತೆ 12 ಆರೋಪಿಗಳನ್ನು ಬಂಧಿಸಿದ್ದಾರೆ. ಸೈಬರ್ ವಂಚನೆ ಮತ್ತು ದರೋಡೆ ಎರಡನ್ನೂ ಒಳಗೊಂಡಿರುವ ಪ್ರಕರಣವೆಂದು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದೂರುದಾರ ವಿಶ್ವಾಸ್ ಬೆಂಗಳೂರಿನಲ್ಲಿ ಕಾಫಿ ಶಾಪ್ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದರು. ಕಾಫಿ ಶಾಪ್‌ಗೆ ಅಗತ್ಯವಾದ ಕಿಚನ್ ಟೈಲ್ಸ್, ಕಟ್ಲರಿ ಹಾಗೂ ಇತರ ಉಪಕರಣಗಳನ್ನು ಚೀನಾ ಮತ್ತು ಜಪಾನ್‌ನಿಂದ ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ಸ್ನೇಹಿತರು ಅವರಿಗೆ ಸಲಹೆ ನೀಡಿದ್ದರು.

ವಿಶ್ವಾಸ್ ಒಂದು ತಿಂಗಳ ಹಿಂದೆ ವಿದೇಶಿ ವ್ಯಾಪಾರ ಮತ್ತು ಕ್ರಿಪ್ಟೋ ವ್ಯವಹಾರಕ್ಕೆ ಸಂಬಂಧಿಸಿದ ವಾಟ್ಸಾಪ್ ಗ್ರೂಪ್‌ಗೆ ಸೇರಿದ್ದರು. ಅಲ್ಲಿ ಪ್ರಮುಖ ಆರೋಪಿ ಮುಜಾಮಿಲ್ ಸೇರಿದಂತೆ ಕೆಲವರ ಪರಿಚಯವಾಗಿತ್ತು. ಜೂನ್ 8ರಂದು ಮುಜಾಮಿಲ್ ವಿಶ್ವಾಸ್ ಅವರನ್ನು ಸಂಪರ್ಕಿಸಿ, ಭಾರತೀಯ ರೂಪಾಯಿಯನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಿ ವಿದೇಶಿ ಕಂಪನಿಗಳಿಗೆ ಸುಲಭವಾಗಿ ಪಾವತಿ ಮಾಡಿಕೊಡುತ್ತೇವೆ ಎಂದು ನಂಬಿಸಿದ್ದಾನೆ. ನಂಬಿದ ವಿಶ್ವಾಸ್ ಹಂತ ಹಂತವಾಗಿ ಒಟ್ಟು 17.64 ಲಕ್ಷ ರೂಪಾಯಿ ನೀಡಿದ್ದರು. ಬಳಿಕ ಆರೋಪಿಗಳು ಹಣವನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸುವ ನೆಪದಲ್ಲಿ ಸಂಪರ್ಕ ಕಡಿದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸಂಜಯನಗರ ಪೊಲೀಸರು ತಾಂತ್ರಿಕ ಮಾಹಿತಿ, ಮೊಬೈಲ್ ಕರೆಗಳ ವಿವರಗಳು, ಬ್ಯಾಂಕ್ ವ್ಯವಹಾರಗಳು ಹಾಗೂ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸಿ 12 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಇಬ್ಬರು ಕಾಶ್ಮೀರ ನಿವಾಸಿಗಳು ಬೆಂಗಳೂರಿಗೆ ಬಿಬಿಎ ಓದಲು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ವಂಚನೆಯ ಹಣವನ್ನು ಯಾವ ಖಾತೆಗಳಿಗೆ ವರ್ಗಾಯಿಸಲಾಗಿದೆ, ಕ್ರಿಪ್ಟೋ ವ್ಯಾಲೆಟ್‌ಮೂಲಕ ವಿದೇಶಕ್ಕೆ ಕಳುಹಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *