ರಾಜ್ಯ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳು ಲಂಚ ಸಂಗ್ರಹಿಸಲು ಸಹಚರರು ಮತ್ತು ಖಾಸಗಿ ವ್ಯಕ್ತಿಗಳ ಸಂಘಟಿತ ತಂಡ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತಂಡ ಅಬಕಾರಿ ಅಂಗಡಿಗಳಿಂದ ಮಾಸಿಕ ನಿಗದಿತ ಲಂಚ ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಪಾವತಿಸುತ್ತಿದೆ. ಪರವಾನಗಿ ನವೀಕರಣ, ವರ್ಗಾವಣೆ ಮತ್ತು ಹೊಸ ಪರವಾನಗಿ ನೀಡುವಾಗ ಮಧ್ಯವರ್ತಿಗಳು ಮತ್ತು ಸಹಚರರ ಸಹಾಯದಿಂದ ಲಂಚ ಸಂಗ್ರಹಿಸಲಾಗುತ್ತಿದೆ. ಯಾರಿಂದ ಸಂಗ್ರಹಿಸಿ ಯಾರಿಗೆ ಪಾವತಿಸಲಾಗಿದೆ ಎಂಬುದನ್ನು ಪುಸ್ತಕದಲ್ಲಿ ನಮೂದಿಸಲಾಗಿದೆ. ಶೋಧದ ವೇಳೆ ಈ ಪುಸ್ತಕವನ್ನು ಜಪ್ತಿ ಮಾಡಿರುವುದಾಗಿ ಇಡಿ ಹೇಳಿದೆ.
ಈ ರೀತಿಯ ಕಾನೂನು ಬಾಹಿರ ಆದಾಯವನ್ನು ಅಧಿಕಾರಿಗಳು ವೈಯಕ್ತಿಕ ಬಳಕೆ, ಆಸ್ತಿಗಳಲ್ಲಿ ಹೂಡಿಕೆ, ವ್ಯವಹಾರಕ್ಕಾಗಿ ಬಳಸಿದ್ದಾರೆ. ಹೆಚ್ಚಿನ ಅಧಿಕಾರಿಗಳು ಕುಟುಂಬದ ಸದಸ್ಯರು ಮತ್ತು ಕುಟುಂಬ ನಿರ್ವಹಿಸುವ ಘಟಕಗಳ ಹೆಸರಿನಲ್ಲಿ ಮದ್ಯದ ಪರವಾನಗಿಗಳನ್ನು ಪಡೆದುಕೊಂಡಿದ್ದಾರೆ. ಅಕ್ರಮ ಮದ್ಯದ ವ್ಯವಹಾರ ನಡೆಸುತ್ತಿದ್ದಾರೆ. ಬರುವ ಆದಾಯವನ್ನು ಕಾನೂನುಬದ್ಧ ವ್ಯವಹಾರಗಳಿಂದ ಬರುತ್ತಿರುವ ಆದಾಯ ಎಂದು ಬಿಂಬಿಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಬಕಾರಿ ಇಲಾಖೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಡಿ.ಮಂಜುನಾಥ್, ಅವರ ಚಾಲಕ, ಕುಟುಂಬದ ಸದಸ್ಯರು ಹಾಗೂ ಸಹಚರರಿಂದ 5.5 ಕೋಟಿ ನಗದು, 7.8 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು, 3.3 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಗಳು ಸೇರಿ ಒಟ್ಟು 13.3 ಕೋಟಿ ರೂ. ಮೌಲ್ಯದ ಅಕ್ರಮ ಆದಾಯ ಪತ್ತೆಯಾಗಿದೆ ಎಂದು ಇಡಿ ತಿಳಿಸಿದೆ
ಸಚಿವ ಸತೀಶ್ ಜಾರಕಿಹೊಳಿ ಭಾವ ವೈ.ಡಿ. ಮಂಜುನಾಥ್, ಜಗದೀಶ್ ನಾಯಕ್, ಕೆ.ಎಂ.ತಮ್ಮಣ್ಣ ಮತ್ತು ಕುಟುಂಬದ ಸದಸ್ಯರು, ವ್ಯವಹಾರದ ಪಾಲುದಾರರು ಹಾಗೂ ಸಹಚರರಿಗೆ ಸೇರಿದ ಬೆಳಗಾವಿ, ಮೈಸೂರು, ಬೆಂಗಳೂರಿನ ನಿವಾಸಗಳು, ಕಚೇರಿಗಳು ಸೇರಿ 14 ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.


