ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್ ಬಿದ್ದು, ಐದು ವರ್ಷದ ಮಗುವೊಂದು ಮೃತಪಟ್ಟಿದೆ. ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ.
ಯಾದಗಿಯ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಕ್ಯಾಬ್ ಚಾಲಕ ದಾವಲ್ ಸಾಬ್ ಬೆಂಗಳೂರಿನಲ್ಲಿ ಹೊಸ ಕೆಲಸದ ಹುಡುಕಾಟದಲ್ಲಿದ್ದರು. ಪತ್ನಿ ಹಾಗೂ ಮಗು ಅಫೀನ್ ಐದು ದಿನಗಳ ಹಿಂದಷ್ಟೇ ಬಂಡಿಕೊಡಿಗೇಹಳ್ಳಿಯಲ್ಲಿರುವ ತಂಗಿಯ ಮನೆಗೆ ಬಂದಿದ್ದರು.
ಸಂಜೆ ಅಫೀನ್ ಪಕ್ಕದ ಮನೆಯ ಮಕ್ಕಳಾದ ಸಮನ್ವಿ ಹಾಗೂ ಮತ್ತೊಂದು ಮಗುವಿನೊಂದಿಗೆ ಬಿ.ಸಿ. ನರಸಪ್ಪ ಎಂಬವರ ಮನೆಯ ಕಾಂಪೌಂಡ್ ಗೇಟ್ ಬಳಿ ಆಟವಾಡುತ್ತಿದ್ದನು. ಮಕ್ಕಳು ಕಬ್ಬಿಣದ ಗೇಟ್ ಹಿಡಿದು ಜೀಕುವಾಗ ಕಾಂಪೌಂಡ್ ಗೋಡೆಯು ಗೇಟ್ ಸಮೇತ ಕುಸಿದು ಬಿದ್ದಿದೆ.
ಸ್ಥಳೀಯರು ತಕ್ಷಣಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳಿಬ್ಬರನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಸಾಗಿಸಬೇಕಾದರೆ ತೀವ್ರ ಗಾಯಗೊಂಡಿದ್ದ ಅಫೀನ್ ಮೃತಪಟ್ಟಿದ್ದಾನೆ. ಮಗು ಸಮನ್ವಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಬಾಗಲೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಯುವಕನ ಕಿರುಕುಳಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ
ಅನ್ಯಧರ್ಮದ ಯುವಕನೊಬ್ಬ ಕೊಟ್ಟ ಕಿರುಕುಳದಿಂದ ಬೇಸತ್ತ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಜಿಎಫ್‌ನ ದೊಡ್ಡಕಾರಿ ಗ್ರಾಮದಲ್ಲಿ ನಡೆದಿದೆ. ಜೀವಿತಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಶಫೀ ಎಂಬ ಯುವಕ ನಿತ್ಯವೂ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಯುವಕ ಬಾಲಕಿಯ ಪೋಷಕರಿಗೂ ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದ, ಬಳಿಕ ಪೋಷಕರು ಬಾಲಕಿಗೆ ಬೈದಿದ್ದರು. ಇದರಿಂದ ನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


