Menu

ಪತಿ ಮಗುವನ್ನು ಅಪಹರಿಸಿರುವುದಾಗಿ ಪತ್ನಿ ದೂರು

ನನ್ನ ಪತಿಯೇ ಐದು ವರ್ಷದ ಮಗನನ್ನು ಕಿಡ್ನಾಪ್ ಮಾಡಿದ್ದಾನೆ, ದಯವಿಟ್ಟು ನನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರಕರಣ ಮಡಿಕೇರಿ ತಾಲೂಕಿನ ಕಾಂತೂರು ಮೂರ್ನಾಡುವಿನಲ್ಲಿ ನಡೆದಿದೆ.

ಮೂರ್ನಾಡು ಗ್ರಾಮದ ನಿವಾಸಿ ಭವ್ಯ ಮಹಿಳೆ ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಮಗುವಿನೊಂದಿಗೆ ತಾಯಿಯ ಮನೆಯಲ್ಲಿ ವಾಸವಿದ್ದಾರೆ. ತಾನು ವಾಸವಿರುವ ಮನೆಗೆ ಬಂದ ಪತಿ ತಿಮ್ಮಯ್ಯ , ಮಗುವನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಭವ್ಯ ಮತ್ತು ತಿಮ್ಮಯ್ಯ ಆರು ವರ್ಷಗಳ ಹಿಂದೆಮದುವೆಯಾಗಿದ್ದು, ಐದು ವರ್ಷದ ಮಗನಿದ್ದಾನೆ. ಒಂದೆರಡು ವರ್ಷಗಳಿಂದ ಇವರಿಬ್ಬರ ಮಧ್ಯೆ ತೀವ್ರ ಜಗಳ ನಡೆಯುತ್ತಿತ್ತು. ಪತಿ ತಿಮ್ಮಯ್ಯ ಗಾಂಜಾ ಮತ್ತು ಮದ್ಯದ ವ್ಯಸನಿ. , ಕೆಲಸಕ್ಕೂ ಹೋಗದೆ ಹೆಂಡತಿಯ ಮೇಲೆ ಅನುಮಾನ ಪಡುತ್ತಾ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಪತಿಯ ಕಾಟ ತಡೆಯಲಾರದೆ ಭವ್ಯ ಆರು ತಿಂಗಳ ಹಿಂದೆ ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಜೂನ್ 10 ರಂದು ಭವ್ಯ ಅವರ ತಾಯಿ ಮನೆ ಸಮೀಪ ಬಂದ ಪತಿ ತಿಮ್ಮಯ್ಯ, ಬಲವಂತವಾಗಿ ಮಗನನ್ನು ಕರೆದುಕೊಂಡು ಹೋಗಿದ್ದಾನೆ. ಭವ್ಯ ಗಂಡನ ಮನೆಗೆ ಹೋಗಿ ನೋಡಿದಾಗ ಪತಿಯಾಗಲಿ, ಮಗನಾಗಲಿ ಅಲ್ಲಿ ಇರಲಿಲ್ಲ. ಪತಿ ಗಾಂಜಾ ವ್ಯಸನಿಯಾಗಿದ್ದರಿಂದ ಮಗುವಿಗೆ ಏನಾದರೂ ಹೆಚ್ಚು ಕಡಿಮೆ ಮಾಡಬಹುದು ಎಂಬ ಆತಂಕವುಂಟಾಗಿದೆ. ಈ ಹಿಂದೆ ತಿಮ್ಮಯ್ಯ ಮಚ್ಚು, ಲಾಂಗು ಹಿಡಿದು ಹಲ್ಲೆಗೆ ಮುಂದಾಗಿದ್ದ ಎಂದು ಭವ್ಯ ತಿಳಿಸಿದ್ದಾರೆ.
ಮಗುವಿನ ಪತ್ತೆಗಾಗಿ ಭವ್ಯ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಅವರಿಗೆ ದೂರು ನೀಡಿದ್ದಾರೆ. ಪೊಲೀಸರು ಮಗುವಿನ ಪತ್ತೆ ಕಾರ್ಯ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *