ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ 30 ಜನರ ಹೆಸರು ಈ ಹಗರಣದಲ್ಲಿ ಕೇಳಿಬಂದಿದೆ. ನಾಗೇಂದ್ರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಿಗೆ 1.20 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ವಾಲ್ಮೀಕಿ ನಿಗಮದ ದುಡ್ಡಲ್ಲಿ ಬೇನಾಮಿ ಕಾರು ಖರೀದಿಸಿದ್ದರು ಎಂದು ಸಿಬಿಐ ಹೇಳಿದೆ.
ಸಿಬಿಐ ತನಿಖೆಯನ್ನು ಪೂರ್ಣಗೊಳಿಸಿದ್ದು, ಮೂರು ಸಂಸ್ಥೆಗಳಲ್ಲಿ ಹಣ ದುರುಪಯೋಗಕ್ಕೆ ಸಂಬಂಧಿಸಿ ಪ್ರತ್ಯೇಕ ಆರೋಪಪಟ್ಟಿಗಳನ್ನು ಸಲ್ಲಿಸಿದೆ. ಮೂರು ಆರೋಪಪಟ್ಟಿಗಳಲ್ಲಿ ನಾಗೇಂದ್ರ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ.
ಬೆಂಗಳೂರಿನ ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮೂವರು ಅಧಿಕಾರಿಗಳು ಮತ್ತು ಇತರರನ್ನು ಹೆಸರಿಸಿ ಸಲ್ಲಿಸಿದ ದೂರಿನ ಆಧಾರದಡಿ ಈ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕ ಹೈಕೋರ್ಟ್ ನಿಯಮಿತ ಸ್ಥಿತಿಗತಿ ಪರಿಶೀಲನೆ ಮೂಲಕ ತನಿಖೆಯನ್ನು ಮೇಲ್ವಿಚಾರಣೆ ನಡೆಸಿದೆ. ತನಿಖೆ ವೇಳೆ ರಾಜ್ಯ ಸರ್ಕಾರಿ ಸಂಸ್ಥೆಗಳಾದ ಎಸ್‌ಟಿ ಕಲ್ಯಾಣ ಇಲಾಖೆ ಮತ್ತು ಕೆಜಿಟಿಟಿಐಗಳಲ್ಲಿ ನಡೆದ ವಂಚನೆ ಬೆಳಕಿಗೆ ಬಂದಿದೆ. ಈ ಎರಡು ಸಂಸ್ಥೆಗಳನ್ನು ಒಳಗೊಂಡ ವಂಚನೆ ಕುರಿತ ಸಿಬಿಐ ತನಿಖೆಯನ್ನು ವಿಸ್ತರಿಸಲು ನ್ಯಾಯಾಲಯ ಆದೇಶಿಸಿದೆ.
ನಾಗೇಂದ್ರ ಅವರ ಆಪ್ತ ಸಹಚರ ನೆಕ್ಕಂಟಿ ನಾಗರಾಜ್ ಮತ್ತು ನಿಗಮದ ಎಂಡಿ ಪದ್ಮನಾಭ ಜೆಜಿ ಅವರ ಯೋಜಿತ ಪಿತೂರಿಯನ್ನು ಸಿಬಿಐ ಬಹಿರಂಗಪಡಿಸಿದೆ. ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಈ ವಂಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಎಟಕರಿ ಸತ್ಯನಾರಾಯಣ್ ಅವರೊಂದಿಗೆ ಸೇರಿ ನಕಲಿ ನೋಂದಣಿ ಪ್ರಮಾಣಪತ್ರ ಮತ್ತು ನಕಲಿ ಕೆವೈಸಿ ದಾಖಲೆಗಳನ್ನು ಬಳಸಿಕೊಂಡು ಸುಳ್ಳು ವ್ಯವಹಾರ ಸಂಸ್ಥೆಗಳ ಹೆಸರಿನಲ್ಲಿ 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಕೆಲಸ ಮಾಡಿದ್ದರು ಎಂಬುದು ತಿಳಿದು ಬಂದಿದೆ.


