ರಾಜಕೀಯ ಇತಿಹಾಸದಿಂದ ಆಡಳಿತಾರೂಢ ಪಕ್ಷಗಳು ಸಾಕಷ್ಟು ಪಾಠ ಕಲಿಯಬೇಕಿದೆ. ಒಟ್ಟಿನಲ್ಲಿ ಈಗ ಸಿದ್ದರಾಮಯ್ಯ -ಶಿವಕುಮಾರ್ ನಿಜವಾದ ಜೋಡೆತ್ತುಗಳಾದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವುಂಟು.
ಜೋಡೆತ್ತುಗಳಿಗೆ ಈಗಿದು ಅಸಲೀ ಸವಾಲ್.
ಹೊಸ ಮಂತ್ರಿಮಂಡಲದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಇರಬೇಕೆ? ಕೆಪಿಸಿಸಿ ಹುದ್ದೆ ಮತ್ತು ಮಂತ್ರಿ ಹುದ್ದೆ ಈ ಎರಡೂ ಒಬ್ಬರ ಕೈಯಲ್ಲಿಯೇ ಹಸ್ತಗತವಾಗಬೇಕೇ? ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ನೂತನ ಸರ್ಕಾರ ರಚನೆಯಾಗುವ ಮುನ್ನವೇ ಈ ವಿಷಯವೀಗ ರಾಜ್ಯದ ಆಡಳಿತಾರೂಢ ಪಕ್ಷದಲ್ಲಿ ವ್ಯಾಪಕ ಮತ್ತು ಗಂಭೀರ ಚರ್ಚೆಗೆ ಗ್ರಾಸವಾಗಿದೆ. ವಾಸ್ತವದಲ್ಲಿ ಇಂತಹ ಚರ್ಚೆಯೇ ಅರ್ಥಹೀನ ಮತ್ತು ಪಕ್ಷ ಮತ್ತು ಸರ್ಕಾರದ ಘನತೆ ಮತ್ತು ಗೌರವಕ್ಕೆ ಚ್ಯುತಿ ತರುವಂತಹದು. ಇದನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಗಮನಿಸಿ ದಿಲ್ಲಿ ಹೈಕಮಾಂಡ್ ಗಮನಕ್ಕೆ ತರುವುದು ಲೇಸು.
ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ವಹಿಸಿದ ಮುತುವರ್ಜಿ ಮತ್ತು ಇಡೀ ಕಾಂಗ್ರೆಸ್ ಶಾಸಕ ಬಣ ತೋರಿದ ನಾಜೂಕುತನ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಗಮನಾರ್ಹ. ಒಬ್ಬರ ಅಧಿಕಾರಗೋಸ್ಕರ ಸಿದ್ದರಾಮಯ್ಯ ಅವರನ್ನು ಹುದ್ದೆಯಿಂದ ಕೆಳಗಿಳಿಸುವುದು ಕಾಂಗ್ರೆಸ್ ಆಶಯವಲ್ಲ ಎಂಬ ಸಂದೇಶವೀಗ ಜನತೆಗೆ ರೋಕ್ಷವಾಗಿ ತಲುಪಿದೆ ನಿಜ. ಆದರೆ ಇದೀಗ ರಚನೆಯಾಗುವ ನೂತನ ಮಂತ್ರಿಮಂಡಲದ ಸಮಯದಲ್ಲಿ ಅಪಸ್ವರ ಮತ್ತು ಕಿತ್ತಾಟ ಶುರುವಾದರೆ ಪಕ್ಷಕ್ಕೆ ಜನತೆಯ ಮುಂದೆ ಮುಜುಗರ ತಪ್ಪಿದ್ದಲ್ಲ.
ಸಿದ್ದರಾಮಯ್ಯ ಅವರೀಗ ರಾಷ್ಟ್ರ ರಾಜಕಾರಣದತ್ತ ಮುಖ ಮಾಡುವುದು ಅನಿವಾರ್ಯ. ಹಾಗೆಯೆ ತನ್ನ ಸುತ್ತಲಿನ ಅನುಯಾಯಿಗಳಿಂದ ತುಸು ಅಂತರ ಕಾಪಾಡಿಕೊಳ್ಳುವುದೂ ಪಕ್ಷದ ಒಗ್ಗಟ್ದಟಿನ ದೃಷ್ಟಿಯಿಂದ ಅನಿವಾರ್ಯ. ಇಲ್ಲವಾದಲ್ಲಿ ರಾಜ್ಯದಲ್ಲಿ ಗುಂಪುಗಾರಿಕೆಯ ರಾಜಕಾರಣಕ್ಕೆ ಓರ್ವ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಯೇ ಕುಮ್ಮಕ್ಕು ನಿಡುವರೆಂಬ ಅಪಖ್ಯಾತಿಗೂ ಒಳಗಾಗಬೇಕಾಗುತ್ತದೆ. ಮೂರು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ೧೩೬ಕ್ಕೂ ಅಧಿಕ ಸೀಟುಗಳನ್ನು ಗಳಿಸಿಕೊಟ್ಟ ಕೆಪಿಸಿಸಿ ರೂವಾರಿ ಇಲ್ಲಿಯವರೆಗೂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನಯ – ನಾಜೂಕುತನದಿಂದಲೇ ಸರ್ಕಾರದ ಸುಗಮ ಕಾರ್ಯ ನಿರ್ವಹಣೆಗೆ ಕೈ ಜೋಡಿಸಿದ್ದು ವಾಸ್ತವ. ಈಗ ಇದೇ ಮನಃಸ್ಥಿತಿ ಹೃದಯ ವೈಶಾಲ್ಯತೆ ಸಿದ್ದರಾಮಯ್ಯ ಅವರೂ ಹೊಂದಿರಬೇಕಷ್ಟೆ. ಏಕೆಂದರೆ ನಿಜವಾಗಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಶಕ್ತಿ ಏನೆಂಬುದು ಸಾಬೀತಾಗಬೇಕಿರುವುದು ಈಗಲೇ. ರಾಜ್ಯಾದ್ಯಂತ ಸಿದ್ದು ಮತ್ತು ಡಿಕೆ ಜಂಟಿ ಪ್ರಚಾರ ಅತ್ಯಗತ್ಯ.
ಇಲ್ಲಿಯವರೆಗಿನ ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಯಶಸ್ವಿ ಯೋಜನೆಗಳ ಬಗ್ಗೆ ಇಲ್ಲಿಯವರೆಗೆ ಆಗಿರುವ ಮತ್ತು ಆಗಬೇಕಿರುವ ಕೆಲಸಗಳ ಬಗ್ಗೆ ಸಿದ್ದರಾಮಯ್ಯ ಅವರ ಸಲಹೆ ಸೂತ್ರಗಳು ಅವಶ್ಯ. ಒಟ್ಟಿನಲ್ಲಿ ಇನ್ನು ಮುಂದಿನ ದಿನಗಳು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ನಿಜವಾದ ಕಠಿಣ ದಿನಗಳು. ೧೯೯೪ರಲ್ಲಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಆದಾಗ, ಜನತಾದಳದ ಸಂಘಟನೆಯ ದೃಷ್ಟಿಯಿಂದ ರಾಮಕೃಷ್ಣ ಹೆಗಡೆ ರಾಜ್ಯದಲ್ಲಿ ಪ್ರವಾಸ ಮಾಡಿದ್ದು ಗಮನಾರ್ಹ. ಆದರೆ ಇಲ್ಲಿಯೂ ಕೆಲವೊಂದು ಕಹಿ ಪ್ರಸಂಗ ಜರುಗಿದ್ದರಿಂದಲೇ ಭವಿಷ್ಯದಲ್ಲಿ ಗೌಡ- ಹೆಗಡೆ ರಾಜಕೀಯ ಸಂಬಂಧಗಳು ಹಳಸಿದ್ದು . ರಾಜಕೀಯ ಇತಿಹಾಸದಿಂದ ಪಾಠ ಕಲಿಯುವುದು ಬಹಳಷ್ಟಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ -ಶಿವಕುಮಾರ್ ಈಗ ನಿಜವಾದ ಜೋಡೆತ್ತುಗಳಾದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವುಂಟು.


