Menu

ಏನಿದು ಇಸ್ರೋ ವಿಜ್ಞಾನಿಗಳ ರಾಜೀನಾಮೆ 

ಇಸ್ರೋ ವಿಜ್ಞಾನಿಗಳ ಸಾಮೂಹಿಕ ರಾಜೀನಾಮೆ ಎಂಬುದು ಕೇಂದ್ರ ಸರ್ಕಾರ ಮತ್ತ ಇಸ್ರೊ ಸಂಸ್ಥೆಗೆ ಮಾತ್ರ ಸಂಬಂಧಿಸಿದ ಸಾಮಾನ್ಯ ವಿಷಯವಂತೂ ಅಲ್ಲ. ಇದು ಬಾಹ್ಯಾಕಾಶ ರಂಗದಲ್ಲಿ ಭಾರತವಿಂದು ಪೈಪೋಟಿ ಎದುರಿಸುತ್ತಿರುವ ಇತರ ದೇಶಗಳ ದೃಷ್ಟಿಯಲ್ಲಿಯೂ ಅತಿ ಗಂಭೀರ.

ದೇಶದ ಪ್ರತಿಷ್ಟಿತ ಇಸ್ರೋ ಸಂಸ್ಥೆಯ ಒಂದು ನೂರಕ್ಕೂ ಅಧಿಕ ಮಂದಿ ವಿಜ್ಞಾನಿಗಳು ತಮ್ಮ ಹುದ್ದೆಗಳಿಗೆ ಸ್ವಯಂ ರಾಜೀನಾಮೆ ಘೋಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ದೇಶದ ಭರವಸೆ ಮತ್ತು ಭವಿಷ್ಯವೂ ಆಗಿರುವ ಇವರ ರಾಜೀನಾಮೆ ಹಿಂದಿನ ನೈಜ ಕಾರಣಗಳು ಇಂದು ಬಹಿರಂಗವಾಗಬೇಕಿದೆ. ಏಕೆಂದರೆ ದೇಶದ ಬಾಹ್ಯಾಕಾಶ ಸಂಸ್ಥೆಯ ಪ್ರತಿಭಾ ಸಂಪನ್ಮೂಲ ಸಮೂಹದಿಂದ ಅಸಾಧಾರಣ ಬಗೆಯ ಸಾಮೂಹಿಕ ರಾಜೀನಾಮೆ ಪ್ರಸಂಗ ಒದಗಿರುವುದು ಸಾಮಾನ್ಯ ಸಂಗತಿಯಂತೂ ಅಲ್ಲ.

ಇಸ್ರೋ ಸಂಸ್ಥೆಯ ಸಂಶೋಧನೆ ಸಿಬ್ಬಂದಿಗೂ ಹಲವು ಹತ್ತು ಔದ್ಯೋಗಿಕ ಸಮಸ್ಯೆಗಳಿರುವುದು ಸಹಜ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಇವರ ಸಮಸ್ಯೆಗಳು ಮತ್ತು ಕುಂದುಕೊರತೆ ಎಂದೂ ಬಹಿರಂಗವಾಗಿ ಚರ್ಚೆಗೆ ಬಂದಿಲ್ಲ. ದೇಶದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇಸ್ರೋ ಸಂಸ್ಥೆಯ ಕೆಲವೊಂದು ವಿಷಯಗಳು ಸಾರ್ವತ್ರಿಕ ಚರ್ಚೆಗೆ ಅವಕಾಶವಿಲ್ಲ ಎಂಬುದೇನೋ ಸರಿ. ಆದರೆ ಇತರ ವಿಷಯಗಳು ಸಮರ್ಪಕ ಪ್ರಮಾಣದಲ್ಲಿ ಚರ್ಚೆ ಆಗಲಿಲ್ಲ ಎಂದಾಗ, ಇದರ ಸಾಧಕ- ಭಾದಕಗಳಿಗೆ ಯಾರು ಹೊಣೆ ಎಂಬ ಗಂಭೀರ ಪ್ರಶ್ನೆ ತಲೆದೋರುವುದರಲ್ಲಿ ಯಾವ ಅನುಮಾನವೂ ಇಲ್ಲ. ದೇಶದ ಪ್ರಧಾನಿ ಅವರ ಸುಪರ್ದಿನಲ್ಲಿರುವ ಇಸ್ರೋ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂಗತಿಯೀಗ ವಿಜ್ಞಾನಿಗಳ ಸಾಮೂಹಿಕ ರಾಜೀನಾಮೆಯಿಂದ ಬಹಿರಂಗವಾಗಿದೆ. ಹಾಗಾದರೆ ಇದಕ್ಕೆ ಸೂಕ್ತ ಮತ್ತು ತ್ವರಿತ ಪರಿಹಾರಗಳೂ ಬೇಕಲ್ಲವೇ?

ವಿಕ್ರಂ ಸಾರಾಭಾಯಿ ಸ್ಥಾಪಿಸಿದ ಟಾಟಾಸಂಸ್ಥೆ, ಇಸ್ರೋ , ಎನ್‌ಎ ಎಲ್, ಮೊದಲಾದ ಸಂಸ್ಥೆಗಳ ಕಾರ್ಯ ನಿರ್ವಹಣೆ ಅತಿಸೂಕ್ಷ್ಮ ಮತ್ತು ಅತಿ ಗುರುತರ. ಈ ವಲಯವು ಇತರೆ ವಲಯಗಳಲ್ಲಿ ಸಹಜವಾಗಿ ಎದ್ದು ಕಾಣುವ ಸಣ್ಣ ಪುಟ್ಟ ಕೊರತೆ ಬೆಟ್ಟದಷ್ಟು ಆಗಬಾರದು. ಇವುಗಳನ್ನು ಸಂಬಂಧಪಟ್ಟ ಇಲಾಖೆ ಮತ್ತು ಸಚಿವಾಲಯ ನಿರ್ಲಕ್ಷ್ಯ ಅಥವಾ ಉದಾಸೀನ ಮಾಡುವ ಮನೋಧೋರಣೆ ಸರಿಯಲ್ಲ. ದೇಶದ ಹಿತಾಸಕ್ತಿಗಾಗಿ ಅಹರ್ನಿಶಿ ದುಡಿಯುವ ಸಾರ್ವತ್ರಿಕ ಸಿಬ್ಬಂದಿಯ ಸಮೂಹದಲ್ಲಿ ಇಸ್ರೋ ವಿಜ್ಞಾನಿಗಳ ಸಮೂಹವೂ ಒಂದು. ಶಿಸ್ತು ಮತ್ತು ಶ್ರದ್ದೆಗೆ ಪ್ರತೀಕವಾದ ಈ ಸಂಸ್ಥೆಯಲ್ಲಿ ತಲೆದೋರಿರುವ ಸಮಸ್ಯೆಗಳು ಉದಾಸೀನ ಮಾಡಿ ಮೂಲೆಗುಂಪು ಮಾಡುವುದು ಸರಿಯಲ್ಲ.

ಇಸ್ರೋ ಎಂಜನಿಯರ್‌ಗಳು ಮತ್ತು ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಮೇಲುಗೈ ಸಾಧಿಸಿದಾಗ ದೇಶದ ಪ್ರಧಾನಿ ಆದಿಯಾಗಿ ಎಲ್ಲರೂ ಇವರ ಸಾಧನೆಯನ್ನು ಕೊಂಡಾಡುತ್ತಾರೆ. ಆದರೆ ಇದೇ ಸಮೂಹ ದೇಶದ ಘನತೆ ಮತ್ತು ಕೀರ್ತಿಯನ್ನು ಕಾಪಾಡಬೇಕಾದರೆ ಸರ್ಕಾರಗಳು ವಹಿಸಬೇಕಿರುವ ಎಚ್ಚರಿಕೆ ಮತ್ತು ಹೊಣೆಗಾರಿಕೆಯೂ ಅತಿ ಮುಖ್ಯ ಇಸ್ರೋ ವಿಜ್ಞಾನಿಗಳ ಸಾಮೂಹಿಕ ರಾಜೀನಾಮೆ ಎಂಬುದು ಕೇವಲ ದೇಶದ ಸರ್ಕಾರ ಮತ್ತ ಸಂಸ್ಥೆಗೆ ಮಾತ್ರವೇ ಸಂಬಂಧಿಸಿದ್ದಲ್ಲ. ಇದು ಬಾಹ್ಯಾಕಾಶ ರಂಗದಲ್ಲಿ ಭಾರತವಿಂದು ಪೈಪೋಟಿ ಎದುರಿಸುತ್ತಿರುವ ಇತರ ದೇಶಗಳ ದೃಷ್ಟಿಯಲ್ಲಿಯೂ ಅತಿ ಮುಖ್ಯ. ಈ ದಿಶೆಯಲ್ಲಿ ತಲೆದೋರಿರುವ ಸಮಸ್ಯೆಗೆ ಸಮಯೋಚಿತ ಪರಿಹಾರವೂ ಬೇಕಿದೆ. ವಿಜ್ಞಾನಿಗಳ ನೈತಿಕ ಸೈರ್ಯ ಕುಸಿಯುವಂಹ ಪ್ರಸಂಗಕ್ಕೆ ಕೇಂದ್ರ ಸರ್ಕಾರ ವೀಗ ಆಸ್ಪದ ನೀಡಬಾರದು.

Related Posts

Leave a Reply

Your email address will not be published. Required fields are marked *