Menu

ಚಡಚಣದಲ್ಲಿ ಗುಂಡಿಕ್ಕಿ ಆರು ಮಂದಿಯ ಹತ್ಯೆ ಪ್ರಕರಣದ 11 ಆರೋಪಿಗಳು ಸೆರೆ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದ ಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ ನಡೆದ ಆರು ಮಂದಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹನ್ನೊಂದು ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಉತ್ತರ ವಲಯದ ಐಜಿಪಿ ಸಂದೀಪ್‌ಪಾಟಿಲ್ ಈ ವಿಷಯ ತಿಳಿಸಿದ್ದಾರೆ. ಮಹರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ್ ತಾಲೂಕಿನ ಕೂಡ್ಲಾ ಗ್ರಾಮದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಹಂತಕರಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿರುವ ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಚಡಚಣ ಠಾಣೆ ಪೊಲೀಸರು ಎಸ್ಪಿ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ಸೋಕೋ ತಂಡ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂರು ಡಿಎಆರ್ ಹಾಗೂ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಜಮೀನು ವಿಚಾರವಾಗಿ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ‌ ನಿರಾಳೆ ಕುಟುಂಬದ ಮಧ್ಯೆ ಜಗಳವಿತ್ತು. ಕೆಲವು ದಿನಗಳ ಹಿಂದೆ ಎರಡೂ ಕುಟುಂಬಗಳ ಮಧ್ಯೆ ನ್ಯಾಯ ಪಂಚಾಯತಿ ಆಗಿತ್ತು. 15-20 ಜನರನ್ನು ಒಳಗೊಂಡ ದುರ್ಷರ್ಮಿಗಳ ಗುಂಪು ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಿರಾಳೆ ಕುಟುಂಬದವರ ಮೇಲೆ ಏಕಾಏಕಿ ದಾಳಿ ನಡೆಸಿ ಅಟ್ಟಾಡಿಸಿ ಆರು ಮಂದಿಯನ್ನು ಕೊಲೆ ಮಾಡಿದೆ.

ನಿರಾಳೆ ಕುಟುಂಬದವರು ಗೋವಿಂದಪುರ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ 24 ಎಕರೆ ವಿವಾದಿತ ಜಮೀನನ್ನು ಆರು ತಿಂಗಳ ಹಿಂದೆ ಖರೀದಿ ಮಾಡಿದ್ದರು. ವಿವಾದಿತ ಜಮೀನು ಖರೀದಿಸದಂತೆ ಊರಿನ ಅಪ್ಪುಗೌಡ ಪಾಟೀಲ್ ಹಾಗೂ ಕೊಲೆ ಮಾಡಿದ ಆರೋಪಿಗಳು ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ. ಆದರೂ ನಿರ್ಲಕ್ಷಿಸಿ ನಿರಾಳೆ ಕುಟುಂಬದವರು ಜಮೀನು ಖರೀದಿ ಮಾಡಿದ್ದರು.  ಟ್ರ್ಯಾಕ್ಟರ್, ಜೆಸಿಬಿ ಮೂಲಕ ಹೊಲವನ್ನು ಸ್ವಚ್ಛಗೊಳಿಸಿ ಕೃಷಿಗೆ ಸಜ್ಜುಗೊಳಿಸುತ್ತಿದ್ದ ವೇಳೆ ಕುಟುಂಬಸ್ಥರ ಮೇಲೆ ಆರೋಪಿಗಳು ದಾಳಿ ನಡೆಸಿರುವುದಾಗಿ ಮಾಹಿತಿ ಲಭಿಸಿದೆ.

Related Posts

Leave a Reply

Your email address will not be published. Required fields are marked *