ಬೆಳಗಾವಿ ನಗರದ ವೈದ್ಯ ದಂಪತಿಯ ಮನೆಯಿಂದ 1.2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರ್ ಟೇಕರ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಸತೀಶ್ ಕಾಂಬ್ಳೆ ಮತ್ತು ಬಾಬಾಸಾಬ್ ಈರಪ್ಪ ಕಟಗೇರಿ ಬಂಧಿತ ಆರೋಪಿಗಳು.
ಪೊಲೀಸರು ಆರೋಪಿಗಳಿಂದ 52.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನಾಭರಣಗಳು ಮತ್ತು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಟ್ಟಿದ್ದ 22.8 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಮನೆಯಲ್ಲಿದ್ದ 930 ಗ್ರಾಂ ಚಿನ್ನದ ಆಭರಣಗಳು ಕಾಣೆಯಾದ ನಂತರ ಮೇ 11 ರಂದು ಬೆಳಗಾವಿಯ ಕ್ಲಬ್ ರಸ್ತೆಯ ನಿವಾಸಿ ಡಾ. ಅನ್ನಪೂರ್ಣ ವಿಶ್ವನಾಥ್ ಧಾದೇದ್ ದೂರು ದಾಖಲಿಸಿದ್ದರು. ದೂರು ಪರಿಶೀಲಿಸಿದ ಪೊಲೀಸರಿಗೆ ಮನೆಯೊಳಗೆ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಅನುಮಾನ ಉಂಟಾಗಿತ್ತು.
ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬ್ರಾವ್ ಮಾಹಿತಿ ನೀಡಿದ್ದು, ಆರೋಪಿ ರಾಹುಲ್ ಕಾಂಬ್ಳೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಡಾ. ವಿಶ್ವನಾಥ್ ಧಾದೇದ್ ಅವರನ್ನು ನೋಡಿಕೊಳ್ಳಲು ಡಿಸೆಂಬರ್ನಲ್ಲಿ ಕೇರ್ಟೇಕರ್ ಆಗಿ ಸೇರಿಕೊಂಡಿದ್ದ. ಕಾಂಬ್ಳೆ ಮೂರು ತಿಂಗಳ ಅವಧಿಯಲ್ಲಿ ಆಗಾಗ ಆಭರಣಗಳನ್ನು ಕಳ್ಳತನ ಮಾಡಿದ್ದು, ನಂತರ ಪರಾರಿಯಾಗಿದ್ದ ಎಂದು ತಿಳಿಸಿದರು.
ಮನೆಯಲ್ಲಿರುವ ಹಳೆಯ ಲಾಕರ್ ಮುಚ್ಚಿದಾಗ ಲಾಕ್ ಆಗಿರುವಂತೆ ಕಂಡುಬಂದಿತ್ತು. ಸ್ವಲ್ಪ ಬಲ ಪ್ರಯೋಗದ ಮೂಲಕ ಅದನ್ನು ತೆಗೆಯಬಹುದಿತ್ತು. ಹೀಗಾಗಿ ಆರೋಪಿಗಳು ಸುಲಭವಾಗಿ ಕಳ್ಳತನ ಮಾಡಿದ್ದಾರೆ. ಕಾಂಬ್ಳೆಯು ಬಾಬಾಸಾಬ್ ಕಟಗೇರಿ ಎಂಬಾತನ ಸಹಾಯದಿಂದ ಕದ್ದ ಆಭರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ ಎಂದು ಹೇಳಿದರು.
ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾರ್ವಜನಿಕರು ಬೆಲೆಬಾಳುವ ಆಭರಣಗಳನ್ನು ಬ್ಯಾಂಕ್ ಲಾಕರ್ಗಳಲ್ಲಿ ಇರಿಸಬೇಕು. ಮನೆ ಲಾಕರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಭದ್ರತೆ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.


