ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕಾರ ಹಸ್ತಾಂತರ ಚರ್ಚೆಗೆ ಅಂತ್ಯ ಹಾಡಿದ್ದಾರೆ. ರಾಜ್ಯಪಾಲರು ರಾಜಭವನದಲ್ಲಿ ಇಲ್ಲದ ಕಾರಣ ಸಿಎಂ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು.
ರಾಜೀನಾಮೆ ಸಲ್ಲಿಕೆಗೂ ಮೊದಲು ಬೆಳಿಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ನಡೆಯಿತು. ಉಪಹಾರ ಸಭೆಯಲ್ಲಿ ಭಾಗಿಯಾಗಿದ್ದ ಮಂತ್ರಿಗಳು ಮತ್ತು ಆಪ್ತ ನಾಯಕರು ಸಿದ್ದರಾಮಯ್ಯ ಅವರ ಸುದೀರ್ಘ ಹೋರಾಟದ ಹಾದಿಯನ್ನು ನೆನೆದು ಭಾವುಕರಾದರು. ಸಹೋದ್ಯೋಗಿ ಮಂತ್ರಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ ಮಧ್ಯಾಹ್ನ ಭೋಜನ ಬಳಿಕ ರಾಜೀನಾಮೆ ಪತ್ರ ಸಲ್ಲಿಸಲು ರಾಜಭವನದತ್ತ ತೆರಳಿದರು.
ಬೆಳಗಿನ ಮೀಟಿಂಗ್ ವೇಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಅಭಿನಂದಿಸಿದರು. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಕಾಲು ಮುಟ್ಟಿ ನಮಕರಿಸಿ ಆಲಿಂಗಿಸಿಕೊಂಡರು. ಯಾವುದೇ ಬೇಸರವಿಲ್ಲದೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು. ಸಿಎಂ ರಾಜೀನಾಮೆ ಘೋಷಿಸಿದ ಬಳಿಕ ಅಲ್ಲಿದ್ದ ಸಚಿವರು, ಮುಖಂಡರು ಮೌನಕ್ಕೆ ಶರಣಾಗಿದ್ದು, ಕೆಲವರು ಕಣ್ಣೀರು ತಡೆದುಕೊಂಡರೂ ಕೆಲವರಿಗೆ ಅದು ಸಾಧ್ಯವಾಗದೆ ಹೋಯಿತು. ಇನ್ನು ಮುಂದೆಯೂ ಎಲ್ಲ ಸಚಿವರು ಕೂಡ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ , ಪಕ್ಷಕ್ಕೆ ನೀಡಬೇಕೆಂದು ಸಿದ್ದರಾಮಯ್ಯ ಸಲಹೆ ನೀಡಿದರು.


