ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನವು ಅಬ್ರಹಾಂ ಒಪ್ಪಂದಕ್ಕೆ ಸೇರ್ಪಡೆಯಾಗಬೇಕು ಎಂದು ಕರೆ ನೀಡಿದ್ದು, ಪಾಕಿಸ್ತಾನ ಸ್ಪಷ್ಟವಾಗಿ ನಿರಾಕರಿಸುವ ಮೂಲಕ ಪ್ಯಾಲೆಸ್ಟೀನ್ ಪರ ನಿಲುವನ್ನು ಮತ್ತೊಮ್ಮೆ ವ್ಯಕ್ತಪಡಿಸಿದೆ. ಇಸ್ರೇಲ್ ಜೊತೆ ಯಾವುದೇ ಸಂಬಂಧ ಸಾಮಾನ್ಯೀಕರಣಕ್ಕೆ ಸಮ್ಮತಿಸುವುದಿಲ್ಲ ಎಂದು ಸಂದೇಶ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಜೊತೆ ಸಂಬಂಧ ಸಾಮಾನ್ಯೀಕರಣಕ್ಕೆ ಅಮೆರಿಕ ಹೊಸ ರಾಜತಾಂತ್ರಿಕ ಪ್ರಯತ್ನ ಮುಂದುವರಿಸುವುದಕ್ಕೆ ಹಿನ್ನಡೆಯುಂಟಾಗಿದೆ. ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್, ನಮ್ಮ ಮೂಲ ಸಿದ್ಧಾಂತ, ವಿದೇಶಾಂಗ ನೀತಿ ಮತ್ತು ಪ್ಯಾಲೆಸ್ಟೀನ್ ಕುರಿತು ಇರುವ ನಿಲುವಿಗೆ ವಿರುದ್ಧವಾಗಿರುವ ಯಾವುದೇ ಒಪ್ಪಂದಕ್ಕೆ ನಾವು ಸೇರಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ. ಇಸ್ರೇಲ್ ಜೊತೆ ರಾಜತಾಂತ್ರಿಕ ಅಥವಾ ಆರ್ಥಿಕ ಸಂಬಂಧಗಳನ್ನು ಬೆಳೆಸುವ ವಿಚಾರ ಪಾಕಿಸ್ತಾನದ ಸಿದ್ಧಾಂತಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ.
ಈಗಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್ ಈ ಒಪ್ಪಂದಕ್ಕೆ ಬದ್ಧತೆ ತೋರಿವೆ. ಟ್ರಂಪ್ ಸೌದಿ ಅರೇಬಿಯಾ, ಕತಾರ್, ಪಾಕಿಸ್ತಾನ, ತುರ್ಕಿಯೆ, ಈಜಿಪ್ಟ್ ಮತ್ತು ಜೋರ್ಡಾನ್ ಸೇರಿದಂತೆ ಹಲವು ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಒಪ್ಪಂದಕ್ಕೆ ಸೇರ್ಪಡೆಯಾಗಬಹುದು ಎಂದು ನಿರೀಕ್ಷಿಸಿದ್ದರು.
1967ರ ಗಡಿಗಳ ಆಧಾರದ ಮೇಲೆ ಪೂರ್ವ ಜೆರೂಸಲೇಂ ರಾಜಧಾನಿಯಾಗಿರುವ ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆಯಾಗುವವರೆಗೆ ಇಸ್ರೇಲ್ಗೆ ಮಾನ್ಯತೆ ನೀಡುವುದಿಲ್ಲ ಎಂದು ಖವಾಜಾ ಆಸಿಫ್ ಖಡಕ್ ಆಗಿ ಹೇಳಿದ್ದಾರೆ. ಪ್ಯಾಲೆಸ್ಟೀನ್ ಜನರ ಹಕ್ಕುಗಳು ಹಾಗೂ ಭೂಸ್ವಾಮ್ಯ ಪ್ರಶ್ನೆ ಪರಿಹಾರವಾಗದೆ ಇಸ್ರೇಲ್ ಜೊತೆ ಸಂಬಂಧ ಬೆಳೆಸುವುದು ಸಾಧ್ಯವಿಲ್ಲ. ಪಾಕಿಸ್ತಾನದ ಪಾಸ್ಪೋರ್ಟ್ ನೀತಿಯಲ್ಲಿ ಇಸ್ರೇಲ್ ಪ್ರವಾಸಕ್ಕೆ ಮಾನ್ಯತೆ ಇಲ್ಲ ಎಂದೂ ಹೇಳಿದ್ದಾರೆ.
ಕಳೆದ ತಿಂಗಳು ಇಸ್ರೇಲ್ ಮಾನವಕುಲಕ್ಕೆ ಶಾಪ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದರು. ಗಾಜಾ ಪ್ರದೇಶದಲ್ಲಿ ನಡೆಯುತ್ತಿರುವ ದಾಳಿಗಳನ್ನು ಉಲ್ಲೇಖಿಸಿ ಅಲ್ಲಿನ ಪರಿಸ್ಥಿತಿ ಜನಾಂಗ ಹತ್ಯೆಯಂತಿದೆ ಎಂದು ಆರೋಪಿಸಿದ್ದರು. ಪ್ಯಾಲೆಸ್ಟೀನ್ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಜಗತ್ತು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು.


