ಕರ್ನಾಟಕದ ಮೇಕೆದಾಟು ಯೋಜನೆ ಸಂಬಂಧ 2025ರ ನವೆಂಬರ್ನಲ್ಲಿ ನೀಡಿದ್ದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುತ್ತಿದ್ದು, ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿತ್ತು.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2025 ನವೆಂಬರ್ ನಲ್ಲಿ ವಜಾಗೊಳಿಸಿತ್ತು. ಆ ತೀರ್ಪನ್ನು ಮರುಪರಿಶೀಲನೆ ಮಾಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜಾಯ್ ಮಾಲ್ಯ ಬಾಗ್ಚಿ, ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠ ವಜಾ ಮಾಡಿ ಆದೇಶ ಪ್ರಕಟಿಸಿದೆ. ಮರು ಪರಿಶೀಲನಾ ಅರ್ಜಿಯ ವಿಷಯಗಳು ಮತ್ತು ಅದರೊಂದಿಗೆ ಲಗತ್ತಿಸಲಾದ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ತೀರ್ಪಿನ ಪುನರ್ ಪರಿಶೀಲನೆ ಅಗತ್ಯ ಇಲ್ಲ ಎಂದು ಪೀಠ ಹೇಳಿದೆ.
ಮೇಕೆದಾಟು ಯೋಜನೆಯ ಪ್ರಸ್ತಾವನೆಯು ತಜ್ಞ ಸಂಸ್ಥೆಗಳ ಪರಿಶೀಲನಾ ಹಂತದಲ್ಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಸೇರಿದಂತೆ ಸಮಿತಿಗಳು ಚರ್ಚೆ ನಡೆಸುತ್ತಿವೆ. ಹೀಗಾಗಿನ್ಯಾಯಾಲಯವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು 2025ರಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.
ಯೋಜನೆಗಾಗಿ ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ತುರ್ತು ಸಭೆ ಕರೆದು ಕರ್ನಾಟಕವು ಮೇಕೆದಾಟು ಅಣೆಕಟ್ಟು ನಿರ್ಮಿಸುವುದನ್ನು ತಡೆಯಲು ಮತ್ತು ತಮಿಳುನಾಡಿನ ಕಾವೇರಿ ನೀರಿನ ಹಕ್ಕನ್ನು ರಕ್ಷಿಸಲು ಕಾನೂನು ಹೋರಾಟ ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.


