Saturday, October 10, 2026
Menu

ಶೀಘ್ರ ಮೇಕೆದಾಟು ಡಿಪಿಆರ್ ಸಲ್ಲಿಕೆ, ಕೇಂದ್ರದ ಅನುಮತಿ ಬಳಿಕ ಭೂಮಿಪೂಜೆ: ಡಿಕೆ ಶಿವಕುಮಾರ್

“ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಈ ಯೋಜನೆಯ ಕಚೇರಿ ಆರಂಭಿಸಿದ್ದೇವೆ. ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಮೀನು ನೀಡಲು ಜಮೀನು ಗುರುತಿಸುತ್ತಿದ್ದೇವೆ. ಶೀಘ್ರವೇ ಕೇಂದ್ರಕ್ಕೆ ಡಿಪಿಆರ್ ಸಲ್ಲಿಕೆ ಮಾಡಲಿದ್ದು, ಕೇಂದ್ರ ಸರ್ಕಾರದ ಅನುಮತಿ ಬಳಿಕ ಯೋಜನೆಯ ಭೂಮಿ ಪೂಜೆ ಮಾಡಲಾಗುವುದು” ಎಂದು  ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೊಳ್ಳೇಗಾಲ ಹೆಲಿಪ್ಯಾಡ್ ಹಾಗೂ ಮಧ್ಯರಂಗ ದೇಗುಲದ ಬಳಿ ಮಾಧ್ಯಮದವರ ಜತೆ  ಮಾತನಾಡಿದರು. ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ 177 ಟಿಎಂಸಿ ನೀರನ್ನು ಬಿಡಲೇಬೇಕು ಎಂದು ಸ್ಪಷ್ಟ ಆದೇಶ ನೀಡಲಾಗಿದೆ. ಇದನ್ನು ಹೇಗೆ ಬಗೆಹರಿಸಬೇಕು ಎಂದು ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇನೆ. ಮೇಕೆದಾಟು ಯೋಜನೆಗೆ ಆಕ್ಷೇಪ ಸಲ್ಲಿಸಲು ತಮಿಳುನಾಡಿಗೆ ಯಾವುದೇ ರೀತಿಯ ಹಕ್ಕಿಲ್ಲ, ಇದರ ಬಗ್ಗೆ ಕೇಂದ್ರ ಜಲ ಆಯೋಗ ತೀರ್ಮಾನ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂದರು.

“ ಅಧಿಕಾರದಲ್ಲಿದ್ದಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಂಡಿದೆ. ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಪ್ರತಿಯೊಬ್ಬ ಫಲಾನುಭವಿಗಳ ಆಸ್ತಿ ದಾಖಲೆಗಳಲ್ಲಿ ಅವರ ಫೋಟೋ, ಆಸ್ತಿಯ ಫೋಟೋ ಹಾಕಿ ಮನೆ ಮನೆಗೆ ಖಾತೆ ಒದಗಿಸಿಕೊಡುತ್ತಿದ್ದೇವೆ. ಬೇರೆಯವರು ಮಾಡಲಾಗದ ಕೆಲಸವನ್ನು ನಾವು ಮಾಡಿ ಜನರ ಋಣ ತೀರಿಸುತ್ತಿದ್ದೇವೆ. ಮುಂದಿನ 2 ವರ್ಷಗಳಲ್ಲಿ ಇನ್ನು ಹೆಚ್ಚಿನ ಕೆಲಸ ಮಾಡುತ್ತಿದ್ದೇವೆ. ಕಳೆದ ಎರಡು ವರ್ಷ ಉತ್ತಮ ಮಳೆಯಾಗಿತ್ತು. ಈ ವರ್ಷ ಮಳೆ ಕೊರತೆಯಾದರೆ ರೈತರನ್ನು ಹೇಗೆ ಕಾಪಾಡಬೇಕು, ಕುಡಿಯುವ ನೀರಿನ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಢ್ಯ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಮಲೆ ಮಾದೇಶ್ವರ, ಮಧ್ಯರಂಗ, ಸಿದ್ದಪ್ಪಾಜಿ, ಗೋಪಾಲಸ್ವಾಮಿ ಪುಣ್ಯಕ್ಷೇತ್ರಗಳಿಗೆ ಬಂದು ಜನ ನೆಮ್ಮದಿ ಕಂಡುಕೊಳ್ಳುತ್ತಾರೆ. ಬೆಳಗ್ಗೆಯಿಂದ ಸೂರ್ಯ ಮುಳುಗುವ ವೇಳೆಗೆ ಶ್ರೀರಂಗಪಟ್ಟಣ (ಆದಿರಂಗ), ಮಧ್ಯರಂಗ ಹಾಗೂ ಅಂತ್ಯರಂಗ ದೇವಾಲಯಗಳಿಗೆ ಭೇಟಿ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ” ಎಂದು ಹೇಳಿದರು.

“ನಮ್ಮ ಸರ್ಕಾರ ಹಾಗೂ ಖಾಸಗಿಯವರು ಸೇರಿ ಈ ದೇವಾಲಯದ ಜೀರ್ಣೋದ್ಧಾರದ ಕೆಲಸ ಮಾಡುತ್ತಿದ್ದೇವೆ.  ಸಚಿವ ಸಂಪುಟ ಸಭೆ ಇದ್ದರೂ ನಾನು ಸೇರಿದಂತೆ ಅನೇಕ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ನಮ್ಮ ಸರ್ಕಾರ ಕೂಡ ಎಲ್ಲೆಡೆ ಅನೇಕ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದೆ. ಇಲ್ಲಿ ಸಚಿವ ಸಂಪುಟ ಸಭೆ ಮಾಡಿ ಈ ಭಾಗದ ಅಭಿವೃದ್ಧಿಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕಾ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.  ಇತಿಹಾಸ ಪುಟಕ್ಕೆ ಹೋಗುವ ಕೆಲಸವನ್ನು ನಮ್ಮ ಸಚಿವರಾದ ವೆಂಕಟೇಶ್  ಮಾಡಿದ್ದಾರೆ” ಎಂದು ತಿಳಿಸಿದರು.

ಜಿಬಿಎ ಚುನಾವಣೆ ಬಗ್ಗೆ ಕೇಳಿದಾಗ, “ಜಿಬಿಎ ಚುನಾವಣೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಚುನಾವಣೆ ನಡೆಸಲು ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡಲು ಸಿದ್ಧವಾಗಿದೆ. ಸಮಯದ ಪ್ರಕಾರ ಚುನಾವಣೆ ನಡೆಯಲಿದೆ. ನಾವೆಲ್ಲ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು. ನೀವು ಯಾವಾಗ ಸಿಎಂ ಆಗುತ್ತೀರಿ ಎಂದು ಕೇಳಿದಾಗ, “ಅದನ್ನು ಕಾಲ ತೀರ್ಮಾನ ಮಾಡುತ್ತದೆ” ಎಂದರು.

Related Posts

Leave a Reply

Your email address will not be published. Required fields are marked *