ಚಿಕ್ಕಮಗಳೂರು ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಕುಮಾರ ದೇವಸ್ಥಾನದ ಬಳಿ ನವಜಾತ ಹೆಣ್ಣು ಮಗುವನ್ನು ಹೆತ್ತ ತಾಯಿ ರಸ್ತೆ ಬದಿಯ ಮುಳ್ಳಿನ ಪೊದೆಯಲ್ಲಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಒಂದು ದಿನದ ಹಸುಗೂಸನ್ನು ಟವೆಲ್‌ನಲ್ಲಿ ಸುತ್ತಿ ಪೊದೆಯಲ್ಲಿ ಎಸೆದು ಹೋಗಲಾಗಿದೆ.
ಗ್ರಾಮದ ಕೃಷಿಕರೊಬ್ಬರು ಗದ್ದೆಗಳಿಗೆ ನೀರು ಬಿಡಲು ಹೋಗುತ್ತಿದ್ದಾಗ ಪೊದೆಯೊಂದರಲ್ಲಿ ಮಗು ಅಳುವ ಶಬ್ದ ಕೇಳಿಸಿದ್ದು, ಹತ್ತಿರ ಹೋಗಿ ನೋಡಿದಾಗ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಮಗುವನ್ನು ಹಳೆಯ ಟವೆಲ್‌ನಲ್ಲಿ ಸುತ್ತಿ ಪೊದೆಯಲ್ಲಿ ಬಿಟ್ಟು ಹೋಗಿದ್ದರು.
ವಿಷಯ ತಿಳಿದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಸ್ಥಳಕ್ಕೆ ಧಾವಿಸಿ ಮಗುವನ್ನು ಎತ್ತಿಕೊಂಡು ಆರೈಕೆ ಮಾಡಿದ್ದಾರೆ. ಎನ್.ಆರ್.ಪುರ ಸಿಡಿಪಿಒವೀರೇಶ್, ಸ್ಥಳೀಯ ಪೊಲೀಸರು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಮಗುವನ್ನು ಎನ್.ಆರ್.ಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮಗುವನ್ನು ಕಳಿಸಲಾಗಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದ್ದು, ಚಿಕ್ಕಮಗಳೂರಿನ ಸರ್ಕಾರಿ ವಿಶೇಷ ದತ್ತು ಸಂಸ್ಥೆಯ ನೇತೃತ್ವದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಗು ಚೇತರಿಸಿಕೊಂಡ ನಂತರ ಚಿಕ್ಕಮಗಳೂರಿನ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಹಸ್ತಾಂತರಿಸಲಾಗುವುದು. ಅಲ್ಲಿ ಮಗುವಿನ ಪೋಷಣೆ ನಡೆಯಲಿದೆ ಎಂದು ಸಿಡಿಪಿಒ ವೀರೇಶ್ ತಿಳಿಸಿದ್ದಾರೆ.
ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


