ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿ ಜಿಎಸ್‌ಟಿ ಹಗರಣ ನಡೆದಿದ್ದು, ಅಮಾಯಕರ ಆಧಾರ್, ಪಾನ್ ಕಾರ್ಡ್ ಬಳಸಿ 102.೫ ಕೋಟಿ ತೆರಿಗೆ ಲೂಟಿ ಮಾಡಿರುವುದನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಈ ಸಂಬಂಧ ಕಿಂಗ್‌ಪಿನ್ ಆಂಧ್ರದ ತೌಕೀರ್ ಎಂಬವನನ್ನು ಬಂಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸಹಚರ ಶೇಕ್ ಜಾಕೀರ್ ಹುಸೇನ್ ಅಲಿಯಾಸ್ ಬಾಷಾ ಎಂಬಾತ ವಿದೇಶಕ್ಕೆ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳು ನಕಲಿ ಕಂಪನಿಗಳನ್ನು ಸೃಷ್ಟಿಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು ತೆರಿಗೆ ಇಲಾಖೆಗೆ ವಂಚಿಸುತ್ತಿದ್ದರು. ವಂಚಿಸಿದ ಹಣ ವಸೂಲಿಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಅಮಾಯಕರ ಪಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಅಕ್ರಮವಾಗಿ ಬಳಸಿ ಹಲವು ನಕಲಿ ಕಂಪನಿಗಳನ್ನು ನೋಂದಣಿ ಮಾಡಿಕೊಂಡು ಸಿಮೆಂಟ್, ಕಬ್ಬಿಣದ ಸರಳುಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಈ ಜಾಲ ಸಕ್ರಿಯವಾಗಿದೆ. ನಕಲಿ ಕಾಂಟ್ರಾಕ್ಟರ್‌ಗಳಿಗೆ ನೀಡಿ ತೆರಿಗೆ ವಂಚನೆಗೆ ಸಹಕರಿಸುತ್ತಿದ್ದರು.
ತೆರಿಗೆ ಇಲಾಖೆಯಿಂದ ನೋಂದಣಿ ಅಥವಾ ನೋಟಿಸ್ ಬರುತ್ತಿದ್ದಂತೆಯೇ ಜಿಎಸ್‌ಟಿ ನೋಂದಣಿ ರದ್ದು ಮಾಡಿ, ಮೊಬೈಲ್ ಸಂಖ್ಯೆಗಳನ್ನು ಬದಲಿಸಿ ಅಲ್ಲಿಂದ ಪರಾರಿ ಆಗುತ್ತಿದ್ದರು. ಬೆಂಗಳೂರಿನ ಅಣ್ಣಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


