ಆಪರೇಷನ್ ಆಕ್ಟೋಪಸ್ 2.0 ಹೆಸರಿನಲ್ಲಿ ಹೈದರಾಬಾದ್ ಪೊಲೀಸರು ಒಂಬತ್ತು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಸೈಬರ್ ವಂಚನೆ ಜಾಲದಲ್ಲಿರುವ 32 ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ 52 ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಹಣ ವರ್ಗಾಯಿಸಲು ಸೈಬರ್ ಅಪರಾಧಿಗಳಿಗೆ ನಕಲಿ ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತಿದ್ದ ಬ್ಯಾಂಕ್ ಅಧಿಕಾರಿಗಳನ್ನು ಗುರಿ ಆಗಿಸಿಕೊಂಡು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಬ್ಯಾಂಕ್ ಆಫ್ ಬರೋಡಾ, ಬಂಧನ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳ ವ್ಯವಸ್ಥಾಪಕರು, ಗುಮಾಸ್ತರು ಮತ್ತು ಕೆವೈಸಿ ಸಿಬ್ಬಂದಿ ಬಂಧಿತರಲ್ಲಿ ಸೇರಿದ್ದಾರೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿ ಹಲವು ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿವೆ.
ಪೊಲೀಸರು ಈ ವಂಚಕರಿಂದ 26 ಮೊಬೈಲ್ , 14 ಚೆಕ್ ಪುಸ್ತಕಗಳು, 21 ನಕಲಿ ಕಂಪನಿಯ ಪತ್ರಗಳು ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಖಾತೆಗಳನ್ನು ರಚಿಸಲು ಮತ್ತು ನಿರ್ವಹಿಸಲು ಈ ದಾಖಲೆಗಳನ್ನು ಬಳಸಲಾಗಿದೆ. ಇಂತಹ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಪರೇಷನ್ ಆಕ್ಟೋಪಸ್ 1.0 ಕಾರ್ಯಾಚರಣೆಯಲ್ಲಿ ನೂರಾರು ನಕಲಿ ಖಾತೆಗಳನ್ನು ತೆರೆದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಾಗರಿಕರು ಒಟಿಪಿಗಳು ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಇತರರಿಗೆ ಬ್ಯಾಂಕ್ ಖಾತೆಯ ವಿವರವನ್ನು ನೀಡಬಾರದು ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಪ್ರಕರಣ ಸಂಬಂಧ ತನಿಖೆ ತೀವ್ರಗೊಂಡಿದೆ.


