ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ದೇಶಾದ್ಯಂತ ಆತಂಕ ಉಂಟಾಗಿದ್ದು, ಕರಾವಳಿ ಪ್ರದೇಶಗಳಿಂದ ದೂರ ಹೋಗುವಂತೆ ನಿವಾಸಿಗಳನ್ನು ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಮೂರು ಮೀಟರ್ ವರೆಗಿನ ಅಲೆಗಳು ಏಳುವ ಸಾಧ್ಯತೆ ಇದೆ, ಅಲೆಗಳು ದಡವನ್ನು ತಲುಪುವ ನಿರೀಕ್ಷೆಯಿರುವುದರಿಂದ ಕರಾವಳಿ ವಲಯಗಳಿಂದ ದೂರವಿರಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಜಪಾನ್ ಹವಾಮಾನ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಸಮುದ್ರದೊಳಗಿನ ಭೂಕಂಪನವು ಸ್ಥಳೀಯ ಸಮಯ ಸಂಜೆ 4.53ಕ್ಕೆ ಇವಾಟೆ ಕರಾವಳಿಯಿಂದ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ಜಪಾನ್ ಪ್ರಧಾನಿ ಸನೇ ತಕೈಚಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ಅಗತ್ಯ ತುರ್ತು ಕಾರ್ಯಪಡೆಯ ನಿಯೋಜನೆ ಮಾಡಲಾಗಿದೆ. ಭೂಕಂಪಪೀಡಿತ ಪ್ರದೇಶಗಳಲ್ಲಿ ತಕ್ಷಣ ನಾಗರಿಕರ ಸ್ಥಳಾಂತರ ಅತ್ಯಗತ್ಯ ಎಂದರು.
ಸುನಾಮಿ ಅಪ್ಪಳಿಸುವ ಸಾಧ್ಯತೆಯಿದೆ. ತಕ್ಷಣ ಕರಾವಳಿ ತೀರದಿಂದ ಜನರು ಸ್ಥಳಾಂತರಗೊಳ್ಳಬೇಕು, ಮುಂದಿನ ಸೂಚನೆ ಬರುವವರೆಗೂ ವಾಪಾಸ್ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಭೂಕಂಪನದ ನಂತರ ಟೋಕಿಯೊ ಮತ್ತು ಅಮೋರಿ ನಡುವಿನ ಬುಲೆಟ್ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.


