Menu

ಹರ್ಮುಜ್ ಜಲಸಂಧಿ ತೆರೆಯಲು ಜಾಗತಿಕ ಒತ್ತಡ ಅಗತ್ಯ

ಹರ್ಮುಜ್ ಜಲಸಂಧಿ ಇರಾನ್ ಹಿಡಿತದಲ್ಲಿದ್ದರೂ ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂದಿಗ್ದತೆಗೆ ಕಾರಣವಾಗಿರುವುದರಿಂದ ತೈಲ ಪಡೆಯುವ ಎಲ್ಲ ದೇಶಗಳು ಒಂದುಗೂಡಿ ಅಮೆರಿಕ- ಇರಾನ್ ಮೇಲೆ ಒತ್ತಡ ಹೇರಿ ಜಲಸಂಧಿಯನ್ನು ತೆರವುಗೊಳಿಸುವಂತೆ ಮಾಡುವುದು ಇಂದಿನ ಅಗತ್ಯ. ಇಲ್ಲದಿದ್ದಲ್ಲಿ ಬಹುತೇಕ ದೇಶಗಳು ತೈಲದ ಕೊರತೆಯಿಂದ ಆರ್ಥಿಕ ಕಷ್ಟಕ್ಕೆ ಸಿಲುಕಲಿವೆ.

ಇರಾನ್ ಮತ್ತು ಅಮೆರಿಕ ತನ್ನ ಒಣಪ್ರತಿಷ್ಠೆಯನ್ನು ಬದಿಗೊತ್ತಿ ಜಾಗತಿಕ ಶಾಂತಿಗಾಗಿ ತ್ಯಾಗ ಮಾಡಬೇಕಾಗಿ ಬಂದಿದೆ. ಇರಾನ್ ಬಗ್ಗುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಅಮೆರಿಕ ತನ್ನ ಮೊಂಡುವಾದವನ್ನು ಬಿಟ್ಟುಕೊಡಬೇಕು. ಅದರಲ್ಲೂ ಟ್ರಂಪ್ ತನ್ನ ಹುಚ್ಚಾಟಕ್ಕೆ ಅಂತ್ಯ ಹಾಡುವುದು ಅಗತ್ಯ. ಅಮೆರಿಕ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುತ್ತದೆ. ಆದರೆ ತನ್ನ ಸಾಮ್ರಾಜ್ಯಶಾಹಿ ಧೋರಣೆಯನ್ನು ಕೈಬಿಡದಿದ್ದಲ್ಲಿ ಎಲ್ಲ ದೇಶಗಳು ಪರಿತಪಿಸಬೇಕಾಗಿ ಬಂದಿದೆ. ಈಗಾಗಲೇ ನ್ಯಾಟೊ ದೇಶಗಳು ಅಮೆರಿಕದಿಂದ ದೂರ ಸರಿದಿದೆ. ಉಳಿದ ದೇಶಗಳೂ ಸೇರಿ ಅಮೆರಿಕಕ್ಕೆ ತನ್ನ ಧೋರಣೆ ಬದಲಿಸಿಕೊಳ್ಳುವಂತೆ ತಿಳಿ ಹೇಳಬೇಕಾದ ಕಾಲ ಬಂದಿದೆ.

ಅಮೆರಿಕ- ಇರಾನ್ ನಡುವೆ ಪಾಕಿಸ್ತಾನದಲ್ಲಿ ನಡೆದ ಮಾತುಕತೆ ವಿಫಲಗೊಂಡಿದೆ. ಆದರೂ ಎಲ್ಲ ದೇಶಗಳೂ ಹರ್ಮುಜ್ ಜಲಸಂಧಿ ಮುಕ್ತಗೊಳಿಸಿದರೆ ಸಾಕು ಎಂದು ಕಾದು ಕುಳಿತಿವೆ. ೩೩ ಕಿಮಿ ಅಗಲದ ಈ ಜಲಸಂಧಿ ದಾಟಲು ನೂರಾರು ಹಡಗುಗಳು ಒಮ್ಮಾನ್ ಕಡೆ ಕಾಯುತ್ತ ಲಂಗರು ಹಾಕಿ ನಿಂತಿವೆ. ಈ ಜಲಸಂಧಿ ಆಯಕಟ್ಟಿನ ಸ್ಥಳದಲ್ಲಿರುವುದರಿಂದ ಎಲ್ಲ ಹಡಗುಗಳು ಇದರ ಮೂಲಕವೇ ಹಾದು ಹೋಗಬೇಕು. ಪ್ರತಿದಿನ ೨೦ ದಶಲಕ್ಷ ಬ್ಯಾರೆಲ್ ತೈಲ ಇಲ್ಲಿಂದ ಇತರ ದೇಶಗಳಿಗೆ ಸರಬರಾಜಾಗಬೇಕು. ಜಗತ್ತಿನ ಶೇ.೨೦ ರಷ್ಟು ನೈಸರ್ಗಿಕ ಅನಿಲ ಇದರ ಮೂಲಕ ಹಾದು ಹೋಗಬೇಕು. ಕತಾರ್ ಈ ಅನಿಲವನ್ನು ಹಲವು ದೇಶಗಳಿಗೆ ಸರಬರಾಜು ಮಾಡುತ್ತದೆ. ಏಷ್ಯಾದ ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಇದೇ ಸಂಪರ್ಕ ಕಲ್ಪಿಸುವ ನೌಕಾ ಮಾರ್ಗ. ತೈಲ ಮತ್ತು ಅನಿಲವಲ್ಲದೆ ಯೂರಿಯಾ, ರಂಜಕ ಮುಂತಾದ ರಸಗೊಬ್ಬರಕ್ಕೆ ಬೇಕಾದ ಕಚ್ಛಾ ವಸ್ತುಗಳು ಇದರ ಮೂಲಕವೇ ಹೋಗಬೇಕು. ಇದಿಲ್ಲ ಎಂದರೆ ಆಫ್ರಿಕಾದ ಗುಡ್ ಹೋಪ್ ಭೂಶಿಖರ ಸುತ್ತಿ ಬರಬೇಕು. ಈ ಜಲಸಂಧಿ ಈಗ ಇರಾನ್ ಹಿಡಿತದಲ್ಲಿದೆ.

ಅಮೆರಿಕ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಅಮೆರಿಕ ಈಗ ತನ್ನ ನೌಕಾಪಡೆಯುನ್ನು ಬಳಸಿ ಇದನ್ನು ಆಕ್ರಮಿಸಿಕೊಳ್ಳಲು ಯೋಜಿಸುತ್ತಿದೆ. ಇರಾನ್ ಪ್ರತಿ ಹಡಗಿಗೆ ೨ ದಶಲಕ್ಷ ಡಾಲರ್ ಶುಲ್ಕ ವಿಧಿಸಲು ಮುಂದಾಗಿದೆ. ಇದು ಮುಂಬರುವ ದಿನಗಳಲ್ಲಿ ತೈಲ ಬೆಲೆ ಏರಿಕೆಗೆ ಕಾರಣವಾಗಲಿದೆ. ಅಮೆರಿಕ ಮತ್ತು ಇಸ್ರೇಲ್ ದೇಶ ಇರಾನ್ ಮತ್ತು ಲೆಬನಾನ್ ಮೇಲೆ ಬಾಂಬ್‌ಗಳ ಸುರಿಮಳೆ ಹಾಕಿ ಅಲ್ಲಿಯ ಜನರನ್ನು ಮನಸೋ ಇಚ್ಛೆಯಂತೆ ಸಾಮೂಹಿಕ ಹತ್ಯೆ ನಡೆಸಿದೆ. ಇಸ್ರೇಲ್ ಕದನ ವಿರಾಮ ಘೋಷಿಸಿಲ್ಲ. ಲೆಬನಾನ್ ಮೇಲೆ ದಾಳಿ ಇರಾನ್‌ಗೆ ಸಂಬಂಧಪಡದ ವಿಷಯ ಎಂಬುದು ಇಸ್ರೇಲ್ ವಾದ. ಇದನ್ನು ಇರಾನ್ ಒಪ್ಪಿಲ್ಲ. ಅಲ್ಲದೆ ಇರಾನ್ ಅಣ್ವಸ್ತ್ರ್ರ ತಯಾರಿಕೆಯನ್ನು ನಿಷ್ಕ್ರಿಯಗೊಳಿಸಬೇಕೆಂಬುದು ಅಮೆರಿಕದ ಮೊಂಡು ವಾದ. ಇದನ್ನು ಇರಾನ್ ಒಪ್ಪಿಲ್ಲ. ಇರಾನ್ ಬೇಕಾದಷ್ಟು ಕ್ಷಿಪಣಿಗಳನ್ನು ತಯಾರಿಸಿ ಇಟ್ಟುಕೊಂಡಿದ್ದು ಅಮೆರಿಕಕ್ಕೆ ತಕ್ಕ ಉತ್ತರ ನೀಡಲು ಸಿದ್ಧವಾಗಿದೆ.

ಮತ್ತೆ ಯುದ್ಧ ಆರಂಭಗೊಂಡರೆ ನಿಲ್ಲುವುದು ಕಷ್ಟ. ಅಮೆರಿಕದ ಬಳಿ ಹೆಚ್ಚು ಸೇನಾ ಸಾಮರ್ಥ್ಯ ಇದ್ದರೂ ಇರಾನ್ ಬಗ್ಗಿಸುವುದು ಕಷ್ಟ ಎಂಬುದು ಈಗಾಗಲೇ ಟ್ರಂಪ್‌ಗೆ ಅರ್ಥವಾಗಿದೆ. ಹೀಗಾಗಿ ಅಮೆರಿಕ ಈಗ ಏಕಾಂಗಿ. ಆದರೂ ಇಸ್ರೇಲ್ ಬೆಂಬಲದಿಂದ ತನ್ನೆಲ್ಲ ಮಿಲಿಟರಿ ಬಲವನ್ನು ಬಳಸುತ್ತಿದೆ. ಅರಬ್ ದೇಶಗಳಲ್ಲಿ ಅಮೆರಿಕ ಹೊಂದಿರುವ ನೆಲೆಗಳನ್ನು ಮಾತ್ರ ಇರಾನ್ ನಾಶಪಡಿಸುತ್ತಿದೆ. ಅದರಿಂದ ಸಾವು ನೋವುಗಳು ಕಡಿಮೆ. ಅಲ್ಲದೆ ವಿಮಾನನಿಲ್ದಾಣ ಮತ್ತು ಬಂದರುಗಳ ಮೇಲೆ ಮಾತ್ರ ವಾಯು ದಾಳಿ ನಡೆಯುತ್ತಿದೆ. ಇರಾನ್‌ಗೆ ಶಸ್ತ್ರಗಳನ್ನು ಒದಗಿಸುವ ದೇಶಗಳ ವಸ್ತುಗಳ ಮೇಲೆ ಶೇಕಡ ೫೦ ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ. ಆದರೆ ತಾನು ಮಾತ್ರ ಶಸ್ತ್ರಗಳನ್ನು ಖರೀದಿ ಮಾಡಲು ಮುಂದಾಗಿದೆ.

Related Posts

Leave a Reply

Your email address will not be published. Required fields are marked *