Menu

ಬೂದಿಯಿಂದ ಎದ್ದೇಳುತ್ತಾ ಜೆಡಿಎಸ್ ?

ಹೆಗಡೆ ಮತ್ತು ದೇವೇಗೌಡರಂದು ತಮ್ಮ ರಾಜಕೀಯ ಬಿಗಿಪಟ್ಟು ಮತ್ತು ಪ್ರತಿಷ್ಠೆ ಸಡಿಲಿಸಿದ್ದಿದ್ದರೆ ಇಂದು ಜನತಾದಳವು. ಡಿಎಂಕೆ ಅಥವಾ ತೆಲುಗುದೇಶಂ ಪಕ್ಷಗಳ ಹಾಗೆ ಕರ್ನಾಟಕದಲ್ಲಿ ಸಿಂಹಗರ್ಜನೆ ಮಾಡುವ ಹಂತದಲ್ಲಿರುತ್ತಿತ್ತು.

ಜನತಾದಳ ವಿಭಜನೆ ಆಗಬಾರದಿತ್ತೇನೋ.. !! ಎಚ್ ಡಿ ದೇವೇಗೌಡರು ಈ ದೇಶದ ಪ್ರಧಾನಿ ಆಗಿದ್ದು ಸರಿ. ಆದರೆ ಅವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಮುಂದುವರಿದಿದ್ದರೆ ಇಂದಿನ ರಾಜ್ಯದ ಚಿತ್ರಣವೇ ಬೇರೆ ಆಗಿರುತ್ತಿತ್ತು. ರಾಜಕಾರಣದಲ್ಲಿ ಹೀಗೆ ಆಗುವುದೆಂದು ಹೇಳಲಾಗದು. ಆದರೆ ೧೯೭೫-೭೬ ರಲ್ಲಿ ಮೂಲ ಜನತಾ ಪಕ್ಷದ ಜನನಕ್ಕೆ ಕಾರಣವಾದ ಕರ್ನಾಟಕವು ಜನತಾ ಪರಿವಾರದ ಸೆಲೆ ಎಂಬುದರಲ್ಲಿ ಎರಡು ಮಾತಿಲ್ಲ. ಪಕ್ಷಗಳನ್ನು ಕಟ್ಟುವುದು ಸುಲಭ. ಆದರೆ ಅವುಗಳನ್ನು ಸುದೀರ್ಘ ಕಾಲಕ್ಕೆ ನಡೆಸುವುದು ಅತಿಕಷ್ಟ. ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಿದ ಬಳಿಕ ರಾಜ್ಯದಲ್ಲಿ ಜೆ ಎಚ್ ಪಟೇಲ್ ನೇತ್ರತ್ವದಲ್ಲಿ ಜನತಾ ದಳ ಸರ್ಕಾರ ಅಸ್ತಿತ್ವದಲ್ಲಿದ್ದರೂ ಈ ಸರ್ಕಾರಕ್ಕೆ ನೆಮ್ಮದಿ ಇರಲಿಲ್ಲ ! ಒಳಜಗಳ, ವ್ಯಕ್ತಿ ಪ್ರತಿಷ್ಟೆ , ಇವೇ ಜನತಾದಳಕ್ಕೆ ಮುಳುವಾಯಿತು. ಯಾರು ದೇಶದ ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಂತು ಜನತಾ ಪರಿವಾರದ ಗುಂಪಿನಲ್ಲಿದ್ದರೋ, ಅವರಲ್ಲಿ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ಮಂದಿ ಕಾಂಗ್ರೆಸ್ ಮನೆಯ ಕದ ತಟ್ಟಿದ್ದು ರಾಜಕೀಯ ನಗ್ನಸತ್ಯ .
ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡ -ಜನತಾದಳದ ಎರಡು ಕಣ್ಣುಗಳು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೋಡೆತ್ತುಗಳಂತೆ ಕಾಂಗ್ರೆಸ್ ವಿರುದ್ದ ಸೆಟೆದು ಜನತಾ ಪಾರ್ಟಿ ಮತ್ತು ಜನತಾದಳಕ್ಕೆ ನೀರೆರೆದವರು. ಅಲ್ಲದೆ ಈ ಪಕ್ಷವನ್ನು ಕಟ್ಟಿ ೧೯೮೩ ಮತ್ತು ೧೯೯೪ರಲ್ಲಿ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಿ ಅಧಿಕಾರ ನಡೆಸಿದವರು. ಆದರೆ ಇಂತಹ ಪಕ್ಷದಲ್ಲಿ ಅಗ್ರ ನಾಯಕರ ನಡುವೆ ನಂಬಿಕೆ ಮತ್ತು ವಿಶ್ವಾಸ ನಶಿಸಿದ್ದು ಗಂಭೀರ ಸಂಗತಿ. ಹೆಗಡೆ ಮತ್ತು ದೇವೇಗೌಡರಂದು ತಮ್ಮ ರಾಜಕೀಯ ಬಿಗಿಪಟ್ಟು ಮತ್ತು ಸ್ವಪ್ರತಿಷ್ಠೆ ಸಡಿಲಿಸಿದ್ದಿದ್ದರೆ ಇಂದು ಜನತಾದಳ, ಡಿಎಂಕೆ ಅಥವಾ ತೆಲುಗುದೇಶಂ ಪಕ್ಷಗಳ ಸಾಲಿನಲ್ಲಿ ಸಿಂಹಜರ್ಜನೆ ಮಾಡುವ ಹಂತದಲ್ಲಿ ಖಂಡಿತವಾಗಿಯೂ ನಿಲ್ಲುತ್ತಿತ್ತು.

ಬೆಂಗಳೂರಿನ ಗಾಂಧಿನಗರದ ಸೆಂಟ್ರಲ್ ಜೈಲಿನಲ್ಲಿ ಜನ್ಮ ತಾಳಿದ ಜನತಾ ಪಕ್ಷವು, ಎಂಭತ್ತರ ದಶಕದ ಆದಿಯಲ್ಲಿ , ಅರಮನೆ ಆವರಣದಲ್ಲಿ ಜನತಾದಳ ರೂಪ ತಾಳಿ ಕೊನೆಗೆ, ಅನಗ್ರಹ ನಿವಾಸದಲ್ಲಿ ಎಸ್ ಮತ್ತು ಯು ಆಗಿ ತುಂಡಾಗಿದ್ದು ಇತಿಹಾಸ. ಪಟೇಲ್, ಸಿ. ಬೈರೇಗೌಡ, ಆರ್ ವಿ. ದೇಶಪಾಂಡೆ, ಜೀವರಾಜ ಆಳ್ವಾ ಮೊದಲಾದವರೆಲ್ಲರೂ ಒಂದು ಕಡೆಯಾದರೆ ಸಿದ್ದರಾಮಯ್ಯ, ಎಚ್ ಡಿ ರೇವಣ್ಣ, ತಿಪ್ಪೇಸ್ವಾಮಿ ಮೊದಲಾದವರು ಬಲವಾಗಿ ವಿರುದ್ದ ದಿಕ್ಕಿನಲ್ಲಿ ನಿಂತರು. ಪ್ರಾಯಶಃ ಇದು ಅವಿಭಜಿತ ಜನತಾದಳದ ರಾಜಕೀಯ ವೈಭವದ ಕೊನೆಯ ದಿನಗಳು. ಮೂಲ ನೆಲೆಯಿಂದ ದೂರವಾದ ಜಾತ್ಯತೀತ ಜನತಾದಳವು ನಡೆದು ಬಂದ ಹಾದಿ ಅಷ್ಟು ಸುಗಮವಲ್ಲ. ಒಂದು ರೀತಿಯಲ್ಲಿ ಜೋಡೆತ್ತು ಹೋಗಿ ದೇವೇಗೌಡರೇ ಒಂಟಿಯಾಗಿ ನೊಗ ಹೊತ್ತು ಸಾಗುವಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ೨೦೦೪ ಮತ್ತು ೨೦೧೮ರಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದರೂ ತನ್ನ ಸ್ವಂತ ಬಲದ ಮೇಲೆ ಸರ್ಕಾರ ನಡೆಸಲು ಸಾಧ್ಯವಾಗಿಲ್ಲ. ಜೆಡಿಎಸ್ ತನ್ನ ೨೫ ವರ್ಷಗಳ ಪಯಣದ ಬಳಿಕವೂ ಯಾರ ನೆರವಿಲ್ಲದೆ ರಾಜ್ಯದಲ್ಲಿ ಕುರ್ಚಿ ಹಿಡಿಯುವ ಸ್ಥಿತಿಯಲ್ಲಿದೆಯೇ ಎಂಬುದೀಗ ಬಹುಚರ್ಚಿತ ಪ್ರಶ್ನೆಯಾಗಿಯೆ ಉಳಿದಿದೆ. ಜೆಡಿಎಸ್ ಫಿನಿಕ್ಸ್ ಪಕ್ಷಿಯಂತೆ ಮತ್ತೆ ಮತ್ತೆ ಬೂದಿಯಿಂದ ಎದ್ದು ಬರುವುದೆಂಬ ನಂಬಿಕೆ ದೇವೇಗೌಡರದ್ದು. ಆದರೆ ಇದು ಎಲ್ಲಿಯವರೆಗೆ ಸಾಧ್ಯ? ಕಾಲವೇ ನಿರ್ಧರಿಸಬೇಕಷ್ಟೆ.

Related Posts

Leave a Reply

Your email address will not be published. Required fields are marked *