“ನಾನು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ. ಅಧಿಕಾರ ಬದಲಾವಣೆ ವಿಚಾರದಲ್ಲಿ ನನ್ನ ಹಾಗೂ ಸಿಎಂ ಹೇಳಿಕೆ ಹೊರತಾಗಿ ಬೇರೆಯವರ ಮಾತು ಗೌಣ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
2028ರವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂಬ ಸಚಿವ ಪರಮೇಶ್ವರ್ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಬೇರೆಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಉತ್ತರಿಸಿದರು. ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಚರ್ಚೆ ಆಗುವುದೇ ಎಂದು ಕೇಳಿದಾಗ, “ಈ ವಿಚಾರವಾಗಿ ನೀವು ಸಮಸ್ಯೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ” ಎಂದರು. ಚುನಾವಣೆ ನಂತರ ನೀವು ಸಿಎಂ ಆಗುತ್ತೀರಿ ಎಂದು ಚರ್ಚೆಯಾಗುತ್ತಿದೆ ಎಂದಾಗ, “ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ” ಎಂದಷ್ಟೇ ಉತ್ತರಿಸಿದರು.
ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆ ಬಗ್ಗೆ ಕೇಳಿದಾಗ, “ನಾನು ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ ಕಡೆ ಹೋಗಿದ್ದೇನೆ. ಬಹಳ ಚೆನ್ನಾಗಿ ಪ್ರಚಾರ ನಡೆದಿದೆ. ಎರಡೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ. ನಮ್ಮ ಸರ್ಕಾರದ ಕಾರ್ಯಕ್ರಮಗಳಿಂದ ಜನ ತೃಪ್ತರಾಗಿದ್ದಾರೆ. ಈಗ ಆಗುತ್ತಿರುವ ಬೆಲೆ ಏರಿಕೆ ಬಗ್ಗೆ ಬಿಜೆಪಿಗರು ಬಾಯಿ ಬಿಚ್ಚುತ್ತಿಲ್ಲ. ಕೇಂದ್ರ ಸರ್ಕಾರ ಕೂಡ ಯಾವುದೇ ಪರಿಹಾರ ಪ್ರಕಟಿಸಿಲ್ಲ. ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಸ್ವಲ್ಪ ಪ್ರಮಾಣದ ನೆರವು ಸಿಕ್ಕಿದೆ. ನಾವು ಎರಡೂ ಕ್ಷೇತ್ರದಲ್ಲಿ ಗೆಲ್ಲಲಿದ್ದು, ಯಾವುದೇ ಸಮಸ್ಯೆ ಇಲ್ಲ” ಎಂದು ತಿಳಿಸಿದರು.
ಅಡುಗೆ ಅನಿಲ ಕೊರತೆಗೆ ಪರ್ಯಾಯವಾಗಿ ಪೆಟ್ರೋಲ್ ಬಳಸಲು ಪ್ರಹ್ಲಾದ್ ಜೋಷಿ ಅವರು ನೀಡಿರುವ ಸಲಹೆ ಬಗ್ಗೆ ಕೇಳಿದಾಗ, “ಜೋಷಿ ಅವರು ನಮ್ಮ ರಾಜ್ಯದ ಹಿತಕ್ಕೆ ಸಹಾಯ ಮಾಡಬೇಕು. ಕೊಲ್ಲಿ ರಾಷ್ಟ್ರಗಳಿಂದ ಇಂಧನ ತಂದ ಎರಡು ಹಡಗುಗಳು ಗುಜರಾತಿಗೆ ಹೋಗಿದ್ದು ಯಾಕೆ? ಮಂಗಳೂರು, ಕೇರಳ ಬಂದರಿಗೆ ಯಾಕೆ ಬರಲಿಲ್ಲ? ಅವರು ಕೇವಲ ಉತ್ತರ ಭಾರತದತ್ತ ಮಾತ್ರ ನೋಡುತ್ತಿದ್ದಾರೆ. ದಕ್ಷಿಣ ಭಾರತವನ್ನು ನಿರ್ಲಕ್ಷಿಸುತ್ತಿದ್ದಾರೆ” ಎಂದು ಹೇಳಿದರು. ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರಾ ಎಂದು ಕೇಳಿದಾಗ, “ದಕ್ಷಿಣ ಭಾರತದಲ್ಲಿ ಅವರಿಗೆ ನೆಲೆ ಇಲ್ಲವಲ್ಲ, ಹೀಗಾಗಿ ರಾಜಕೀಯ ಮಾಡುತ್ತಿದ್ದಾರೆ” ಎಂದರು.
ಕೇರಳಂ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, “ನಾನು ಹಾಗೂ ಕೆಲವು ಶಾಸಕರು ಕೇರಳಂ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಬಂದಿದ್ದೇವೆ. ಈ ಬಾರಿ ಕೇರಳಂನಲ್ಲಿ ಯುಡಿಎಫ್ ಮೈತ್ರಿಕೂಟಕ್ಕೆ ಮೂರನೇ ಎರಡರಷ್ಟು ಬಹುಮತ ಸಿಗುವ ಆತ್ಮವಿಶ್ವಾಸವಿದೆ. 10 ವರ್ಷಗಳ ಎಲ್ ಡಿಎಫ್ ಆಡಳಿತದಿಂದ ಅಲ್ಲಿನ ಜನ ಬೇಸತ್ತಿದ್ದಾರೆ. ಅವರು ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಅಲ್ಲಿ ಯಾವುದೇ ಗುರುತರವಾದ ಅಭಿವೃದ್ಧಿಯಾಗಿಲ್ಲ. ಹೊರ ದೇಶದಲ್ಲಿರುವ ಮತದಾರರು ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವಾಗುತ್ತಿಲ್ಲ. ಕೇರಳಂ ಮೂಲದ ಅನಿವಾಸಿ ಭಾರತೀಯರು ಯುಡಿಎಫ್ ಮೈತ್ರಿಕೂಟಕ್ಕೆ ಮತ ಹಾಕುತ್ತಾರೆ ಎಂದು ಅವರು ಚುನಾವಣೆಯಲ್ಲಿ ಭಾಗವಹಿಸಲು ಬರಲು ಹೆಚ್ಚು ವಿಮಾನ ಸೌಲಭ್ಯ ಕಲ್ಪಿಸುತ್ತಿಲ್ಲ. ಯುಡಿಎಫ್ ಮೈತ್ರಿಕೂಟ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು, ನಾನು 14 ಪ್ರಚಾರ ಸಭೆ, ರೋಡ್ ಶೋಗಳಲ್ಲಿ ಭಾಗವಹಿಸಿ ಬಂದಿದ್ದೇನೆ. ಅಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಶಿಸ್ತು ಹೆಚ್ಚಾಗಿದ್ದು, ಅವರಿಂದ ಕಲಿಯುವುದು ಸಾಕಷ್ಟಿದೆ” ಎಂದು ವಿವರಿಸಿದರು.


