ಹಳೆಯ ಮನೆ ಕುಸಿದು ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಕೋಲಾರದ ಮುಳಬಾಗಿಲು ನಗರದಲ್ಲಿ ನಡೆದಿದೆ. ಈ ದುರಂತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಬಾಲಕಿಯನ್ನು ವಹಿನೂರ್ (15) ಎಂದು ಗುರುತಿಸಲಾಗಿದೆ.
ಸುಹೇಲ್, ಕೌಸರ್, ಅಯಾಜ್ ಮತ್ತು ಅಬ್ಜರ್ ಗಾಯಗೊಂಡವರು. ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಅಣ್ಣ ತಂಗಿ ಬಲಿ
ವಾರಾಣಸಿಯ ಲಹರ್ತಾರಾ ಪ್ರದೇಶದ ಮನೆಯೊಂದರಲ್ಲಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಣ್ಣ-ತಂಗಿ ಮೃತಪಟ್ಟಿದ್ದಾರೆ. ಮನೆ ಸಂಪೂರ್ಣವಾಗಿ ಧ್ವಂಸವಾಗಿದೆ. ತಾಯಿ ಮತ್ತು ಇನ್ನೊಬ್ಬ ತಮ್ಮನನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಗ್ಯಾಸ್ ಸಿಲಿಂಡರ್ ಸ್ಫೋಟದ ನಂತರ ಮನೆ ಕುಸಿದು ಅಮನ್ ಚೌಧರಿ (30) ಮತ್ತು ಪ್ರೀತಿ (28) ಅಸು ನೀಗಿರುವುದಾಗಿ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಪೊಲೀಸರು, ಅಗ್ನಿಶಾಮಕ ಸೇವೆಗಳು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ಗಿರಿಜಾ ದೇವಿ, ಅವರ ಇಬ್ಬರು ಪುತ್ರರು ಮತ್ತು ಮಗಳನ್ನು ಅವಶೇಷಗಳಿಂದ ಹೊರಗೆಳೆದರು.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ರಾತ್ರಿಯಿಂದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗುತ್ತಿದ್ದು, ಗಿರಿಜಾ ದೇವಿ ಬೆಳಿಗ್ಗೆ ಸ್ಟೌವ್ ಹಚ್ಚಲು ಹೋದಾಗ ಸ್ಫೋಟಗೊಂಡಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಹತ್ತಿರದ ಮನೆಗಳಲ್ಲಿಯೂ ಬಿರುಕುಗಳು ಉಂಟಾಗಿವೆ.


