Menu

ಆನ್‌ಲೈನ್‌ ವಹಿವಾಟುಗಳಿಗೆ 2-ಫ್ಯಾಕ್ಟರ್ ಅಥೆಂಟಿಕೇಶನ್ ಏ.1ರಿಂದ ಜಾರಿ

ದೇಶದಲ್ಲಿ ಸೈಬರ್ ವಂಚನೆ ನಿಯಂತ್ರಣ ಕ್ರಮವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 1, 2026 ರಿಂದ ಎಲ್ಲಾ ಆನ್‌ಲೈನ್ ವಹಿವಾಟುಗಳಿಗೆ 2-ಫ್ಯಾಕ್ಟರ್ ಅಥೆಂಟಿಕೇಶನ್ ಕಡ್ಡಾಯಗೊಳಿಸುತ್ತಿದೆ. ೨-ಫ್ಯಾಕ್ಟರ್ ಅಥೆಂಟಿಕೇಶನ್ ಎಂದರೆ ಯಾವುದೇ ಡಿಜಿಟಲ್ ವಹಿವಾಟು ನಡೆಸಲು ಎರಡು ವಿಭಿನ್ನ ರೀತಿಯ ಧೃವೀಕರಣ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಈ ಮೂಲಕ ವಂಚನೆ ಮತ್ತು ಅನಧಿಕೃತ ವಹಿವಾಟುಗಳನ್ನು ತಡೆಗಟ್ಟಬಹುದಾಗಿದೆ.

ಎರಡು ಧೃವೀಕರಣ ವಿಧಾನಗಳಲ್ಲಿ ಒಂದು ಪ್ರತಿ ಬಾರಿ ಬದಲಾಗುವ (ಡೈನಾಮಿಕ್ ) ಆಗಿರಬೇಕು ಮತ್ತು ಇನ್ನೊಂದನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಸೇರಿದಂತೆ ಎಲ್ಲಾ ರೀತಿಯ ಆನ್‌ಲೈನ್ ವಹಿವಾಟುಗಳಿಗೆ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ ಕಡ್ಡಾಯವಾಗಲಿದೆ.

ಈ ನಿಯಮಗಳನ್ನು ಪಾಲಿಸದ ಕಾರಣ ವಂಚನೆ ಸಂಭವಿಸಿದಲ್ಲಿ, ಆ ನಷ್ಟವನ್ನು ಗ್ರಾಹಕರಿಗೆ ಬ್ಯಾಂಕುಗಳೇ ಭರಿಸಬೇಕಾಗುತ್ತದೆ. ಗ್ರಾಹಕರಿಗೆ ಸಂಪೂರ್ಣ ನಷ್ಟ ಪರಿಹಾರ ಪಾವತಿಸಬೇಕಾದ ಜವಾಬ್ದಾರಿ ಬ್ಯಾಂಕುಗಳ ಮೇಲಿರುತ್ತದೆ.
ಅಪಾಯಕಾರಿ ಎಂದು ಗುರುತಿಸಲಾದ ವಹಿವಾಟುಗಳಿಗೆ ಹೆಚ್ಚುವರಿ ತಪಾಸಣಾ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ನಿಯಮ ಜಾರಿಗೆ ಬಂದ ನಂತರ, ಪ್ರತಿ ಆನ್‌ಲೈನ್ ವಹಿವಾಟು ನಡೆಸಲು ಸ್ವಲ್ಪ ಹೆಚ್ಚಿನ ಸಮಯ ಬೇಕಾಗಬಹುದು. ಆದರೆ ಭದ್ರತಾ ಮಟ್ಟ ಗಣನೀಯವಾಗಿ ಹೆಚ್ಚಾಗಲಿದೆ. ವಂಚನೆ ಮತ್ತು ಅನಧಿಕೃತ ವಹಿವಾಟುಗಳಿಂದ ಗ್ರಾಹಕರ ಹಣ ಸುರಕ್ಷಿತವಾಗಿರಲಿದೆ.

ಎಲ್ಲಾ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಕಾರ್ಡ್ ನೆಟ್ವರ್ಕ್‌ಗಳು ಮತ್ತು ಫಿನ್ಟೆಕ್ ಕಂಪನಿಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರ್‌ಬಿಐ ಆದೇಶಿಸಿದೆ. ಹೊಸ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ಬಳಕೆದಾರರು ಆನ್‌ಲೈನ್ ಪಾವತಿ ವ್ಯವಸ್ಥೆಗಳನ್ನು ಅದಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ.

Related Posts

Leave a Reply

Your email address will not be published. Required fields are marked *