Menu

ಪಿತೃತ್ವ ರಜೆ ಕಾನೂನು ರೂಪಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಮಗುವಿನ ಪಾಲನೆ ತಾಯಿಯ ಜವಾಬ್ದಾರಿ ಮಾತ್ರವಲ್ಲ, ಪೋಷಕರಿಬ್ಬರ ಹಂಚಿಕೆಯ ಹೊಣೆಗಾರಿಕೆ ಎಂದಿರುವ ಸುಪ್ರೀಂ ಕೋರ್ಟ್‌, ಪಿತೃತ್ವ ರಜೆಯನ್ನು ಒಂದು ಸೌಲಭ್ಯವನ್ನಾಗಿ ನೋಡದೆ ‘ಸಾಮಾಜಿಕ ಭದ್ರತಾ ಹಕ್ಕು’ ಎಂದು ಪರಿಗಣಿಸಿ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ತಂದೆ ಮತ್ತು ಮಗು ಇಬ್ಬರ ಅಗತ್ಯಗಳನ್ನು ಪೂರೈಸುವ ರೀತಿ ಈ ರಜೆಯ ಅವಧಿಯನ್ನು ನಿಗದಿಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ.

ದತ್ತು ಪಡೆದ ತಾಯಂದಿರಿಗೆ ಇದ್ದ ರಜೆಯ ನಿರ್ಬಂಧವನ್ನು ನ್ಯಾಯಾಲಯ ತೆರವುಗೊಳಿಸಿದೆ.ಜಾರಿಯಲ್ಲಿರುವ ‘ಸಾಮಾಜಿಕ ಭದ್ರತಾ ಸಂಹಿತೆ-2020’ರ ಪ್ರಕಾರ, ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆದರೆ ಮಾತ್ರ ತಾಯಿಗೆ 12 ವಾರಗಳ ಮಾತೃತ್ವ ರಜೆ ಸಿಗುತ್ತಿತ್ತು. ಈ ವಯಸ್ಸಿನ ಮಿತಿಯನ್ನು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿ, ‘ಮಗುವಿನ ವಯಸ್ಸು ಎಷ್ಟೇ ಇರಲಿ, ಕಾನೂನುಬದ್ಧವಾಗಿ ಮಗುವನ್ನು ದತ್ತು ಪಡೆದ ತಾಯಿ 12 ವಾರಗಳ ರಜೆಗೆ ಅರ್ಹಳು’ ಎಂದು ತೀರ್ಪು ನೀಡಿದೆ.

ಮಗುವಿನ ಆರಂಭಿಕ ಹಂತದ ಬೆಳವಣಿಗೆಯಲ್ಲಿ ತಂದೆಯ ಉಪಸ್ಥಿತಿಯು ಅಗತ್ಯ, ಇದು ತಾಯಿಗೆ ಹೆರಿಗೆಯ ನಂತರದ ಕಷ್ಟದ ಸಮಯದಲ್ಲಿ ಬೆಂಬಲ ನೀಡುವುದಲ್ಲದೆ, ಪೋಷಣೆಯಲ್ಲಿ ತಂದೆಯ ಪಾತ್ರವನ್ನು ಗಟ್ಟಿಗೊಳಿಸುತ್ತದೆ ಎಂದು ನ್ಯಾಯಮೂರ್ತಿ ಪಾರ್ದೀವಾಲಾ ಹೇಳಿದ್ದಾರೆ.

ಮಹಿಳೆಯರಿಗೆ ಸೀಮಿತವಾಗಿದ್ದ ಮಗುವಿನ ಪೋಷಣೆಯ ಜವಾಬ್ದಾರಿಯನ್ನು ಗಂಡು ಮತ್ತು ಹೆಣ್ಣಿನ ನಡುವೆ ಸಮಾನವಾಗಿ ಹಂಚುವ ಮೂಲಕ ಸಮಾಜದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುತ್ತದೆ. ಮಹಿಳೆಯರು ತಮ್ಮ ವೃತ್ತಿಜೀವನವನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಮಹಿಳೆಯರಿಗೆ ಹೆರಿಗೆ ರಜೆ ಕಾನೂನುಬದ್ಧವಾಗಿದ್ದು, ಇಬ್ಬರಿಗಿಂತ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ 26 ವಾರಗಳ ವೇತನ ಸಹಿತ ರಜೆ ನೀಡಲಾಗುತ್ತದೆ. ಪಿತೃತ್ವ ರಜೆಗೆ ಸಂಬಂಧಿಸಿದಂತೆ ದೇಶದಲ್ಲಿ ಯಾವುದೇ ರಾಷ್ಟ್ರೀಯ ಕಾನೂನು ಇಲ್ಲ. ಕೆಲವು ಖಾಸಗಿ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಸೀಮಿತ  ರಜೆ  ಅವಕಾಶ ಇದೆ.

Related Posts

Leave a Reply

Your email address will not be published. Required fields are marked *