ಉತ್ತರಪ್ರದೇಶದ ಸಹರಾನ್ಪುರದಲ್ಲಿ ಐಸಿಸ್ ಜೊತೆ ಸಂಪರ್ಕ ಹೊಂದಿದ್ದ 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ. ಹರಿಶ್ ಅಲಿ ಬಂಧಿತ ಆರೋಪಿ.
ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಆನ್‌ಲೈನ್ ಮಾಡ್ಯೂಲ್‌ನೊಂದಿಗೆ ಈತ ಸಂಪರ್ಕ ಹೊಂದಿರುವ ಆರೋಪವಿದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಸಿಸ್ ಸಂಬಂಧಿತ ಆನ್‌ಲೈನ್ ನೆಟ್‌ವರ್ಕ್ ಚಟುವಟಿಕೆಗಳ ಕುರಿತು ನಡೆಯುತ್ತಿರುವ ತನಿಖೆಯ ಸಂದರ್ಭದಲ್ಲಿ ಆತನನ್ನು ಅರೆಸ್ಟ್ ಮಾಡಲಾಗಿದೆ.
ಆರೋಪಿಯು ಎರಡನೇ ವರ್ಷದ ಬಿಡಿಎಸ್ ವಿದ್ಯಾರ್ಥಿ, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು, ಡಿಸ್ಕಾರ್ಡ್‌ನಂತಹ ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಮೂಲಕ ಐಸಿಸ್ ನಿರ್ವಾಹಕರ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ಷರಿಯಾ ಆಧಾರಿತ ಖಲೀಫತ್ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿರುವ ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡಲು ಆನ್‌ಲೈನ್ ಗ್ರೂಪ್‌ಗಳನ್ನು ಕೆಲವರು ರಚಿಸುತ್ತಿದ್ದಾರೆ. ಭಾರತದಲ್ಲಿ ಭಯೋತ್ಪಾದಕ ಸಂಘಟನೆಯನ್ನು ಬಲಪಡಿಸಲು ಜನರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿಗಳು ಎಚ್ಚರಿಸಿವೆ.
ಲಕ್ನೋದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಬಿಎನ್‌ಎಸ್ ಸಂಬಂಧಿತ ವಿಭಾಗಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಐಸಿಸ್ ಬಗ್ಗೆ ಪ್ರಚಾರ ಮಾಡಲು ಹೆಸರುಗಳನ್ನು ಬದಲಾಯಿಸಿಕೊಂಡಿದ್ದರು. ವರ್ಚುವಲ್ ಖಾಸಗಿ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಗುಂಪುಗಳನ್ನು ರಚಿಸಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.


