Menu

ಠಾಣೆಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ: ಮೂಡಬಿದ್ರೆ ಇನ್ಸ್​ಪೆಕ್ಟರ್ ವಿರುದ್ಧ ಆರೋಪ

ದಕ್ಷಿಣ ಕನ್ನಡದ ಮೂಡಬಿದ್ರೆ ಪೊಲೀಸ್ ಠಾಣೆಗೆ ಹೋಗಿದ್ದ ಮಹಿಳೆಗೆ ಇನ್ಸ್​ಪೆಕ್ಟರ್ ಸಂದೇಶ್ ಎಂಬಾತ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ನಾನು ಗೃಹ ಸಚಿವರಿಗೆ 50 ಲಕ್ಷ ಲಂಚ ನೀಡಿ ಪೋಸ್ಟಿಂಗ್ ಪಡೆದಿದ್ದೇನೆ, ನನ್ನ ಮೇಲೆ ದೂರು ಕೊಟ್ಟ ನಿನ್ನ ಗಂಡನನ್ನ ಅರೆಸ್ಟ್ ಮಾಡಿದ್ದೇನೆ ಎಂದು ಇನ್ಸ್​ಪೆಕ್ಟರ್ ಹೇಳಿದ್ದಾಗಿ ಮಹಿಳೆ ತಿಳಿಸಿದ್ದಾರೆ.

ಸುಳ್ಳು ಕೇಸ್‌ನಲ್ಲಿ ಬಂಧನಕ್ಕೊಳಗಾದ ಪತಿಯನ್ನು ಬಿಡುಗಡೆ ಮಾಡುವಂತೆ ಕೋರಿ ಮಹಿಳೆ, ಮೂಡಬಿದ್ರೆ ಪೊಲೀಸ್ ಠಾಣೆಗೆ ತೆರಳಿದ್ದಾಗ ಇನ್ಸ್​ಪೆಕ್ಟರ್​ ಸಂದೇಶ, ಪತಿಯನ್ನು ಬಿಡುಗಡೆ ಮಾಡಲು 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದಲ್ಲಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದಾರೆ. ಆಗದಿದ್ದರೆ ನಿನ್ನ ಗಂಡನ ಮೇಲೆ ರೌಡಿಶೀಟ್ ಓಪನ್ ಮಾಡುವುದಾಗಿ ಇನ್ಸ್​ಪೆಕ್ಟರ್​ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.

ನೂರಾರು ಮಹಿಳೆಯರು ಇದೇ ರೀತಿ ನನ್ನ ಜೊತೆಗೆ ಇದ್ದಾರೆ. ಅವರಂತೆ ನೀನು ಕೂಡ ಲೈಂಗಿಕವಾಗಿ ಸಹಕರಿಸು. ಇಲ್ಲದಿದ್ರೆ ಡ್ರಗ್ಸ್​ ಪೆಡ್ಲರ್​ಗಳಿಗೆ ಹೇಳಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಇನ್ಸ್​ಪೆಕ್ಟರ್​ ಸಂದೇಶ್ ಧಮ್ಕಿ ಹಾಕಿದ್ದಾಗಿ ಸಂತ್ರಸ್ತ ಮಹಿಳೆ ಹೇಳಿದ್ದಾರೆ. ಈ ಸಂಬಂಧ ಸಂತ್ರಸ್ತೆ ಇನ್ಸ್​ಪೆಕ್ಟರ್​ ಸಂದೇಶ್‌ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು, ಯಾವುದೇ ಉಪಯೋಗವಾಗಿಲ್ಲ. ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆಯ ಪತಿ ಸಾಮಾಜಿಕ ಕಾರ್ಯಕರ್ತ, ಜುಲೈ ತಿಂಗಳಲ್ಲಿ ಕೆಲವು ಮಹಿಳೆಯರು ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಕಿರುಕುಳದ ದೂರು ಹೇಳಿದಾಗ ಇವರು ಅವರಿಗೆ ಸಹಾಯ ಮಾಡಿ ಪೊಲೀಸ್ ಕಮಿಷನರ್‌ಗೆ ದೂರು ನೀಡಲು ಮಾರ್ಗದರ್ಶನ ನೀಡಿದ್ದರು. ಈ ವಿಚಾರ ತಿಳಿದ ಇನ್ಸ್‌ಪೆಕ್ಟರ್ ಸಂದೇಶ್, ಸಾಮಾಜಿಕ ಕಾರ್ಯಕರ್ತನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ದಾಂಧಲೆ ನಡೆಸಲು ಆರಂಭಿಸಿದ್ದ ಎಂದು ಮಹಿಳೆ ತಿಳಿಸಿದ್ದಾರೆ.

50 ಸಾವಿರ ರೂಪಾಯಿ ನೀಡಿ ಪತಿಯನ್ನು ಮಹಿಳೆ ಸ್ಟೇಷನ್ ಬೇಲ್ ಮೇಲೆ ಬಿಡಿಸಿಕೊಂಡಿದ್ದಾರೆ. ಇನ್ಸ್‌ಪೆಕ್ಟರ್ ಕಿರುಕುಳ ತಾಳಲಾರದೆ ಪತಿ ಊರು ಬಿಟ್ಟು ಹೋಗಿದ್ದಾರೆ. ಪತಿಯನ್ನು ಹುಡುಕುವ ನೆಪದಲ್ಲಿ ತನ್ನನ್ನು ಸ್ಟೇಷನ್‌ಗೆ ಅಥವಾ ತಾನು ಹೇಳಿದ ಕಡೆಗೆ ಬರುವಂತೆ ಇನ್ಸ್‌ಪೆಕ್ಟರ್ ಪೀಡಿಸುತ್ತಿದ್ದಾರೆ ಎಂದು ಮಹಿಳೆ ಮಾಧ್ಯಮಗಳ ಮುಂದೆ ಅಳಲು ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *