ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಮ್ ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗವು ಪ್ರಕಟಿಸಿದೆ.
ಅಸ್ಸಾಮ್, ಕೇರಳ, ಪುದುಚೆರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತದಲ್ಲಿ ನಡೆಯಲಿದೆ. ಉಳಿದ ನಾಲ್ಕು ಕಡೆ ಒಂದೇ ಹಂತದಲ್ಲಿ ಮತದಾನವಾಗಲಿದೆ. ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಹಳಷ್ಟು ಜಾಗಗಳು ಹಿಂಸಾಚಾರಗಳಿಗೆ ಸೂಕ್ಷ್ಮವಾಗಿರುವುದರಿಂದ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತದೆ. ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ಈ ಮೇಲಿನ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಯಲ್ಲಿ ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಐದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 824 ಕ್ಷೇತ್ರಗಳಲ್ಲಿ 17.4 ಕೋಟಿ ಮತದಾರರಿದ್ದಾರೆ. 2.19 ಲಕ್ಷ ಪೋಲಿಂಗ್ ಸ್ಟೇಷನ್ಗಳಿವೆ. 25 ಲಕ್ಷ ಮತದಾನ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.
ಕರ್ನಾಟಕ ಸೇರಿ ಆರು ರಾಜ್ಯಗಳಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಉಪಚುನಾವಣೆಗಳು ನಡೆಯಲಿವೆ. ಉಳಿದ ರಾಜ್ಯಗಳಲ್ಲಿನ ಉಪಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ. ಮೇ 4ರಂದು ಎಲ್ಲಾ ವಿಧಾನಸಭಾ ಚುನಾವಣೆಗಳು ಮತ್ತು ಉಪಚುನಾವಣೆಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.


