Menu

ತೈಲ ಬೆಲೆ ಏರಿಕೆಯಾದರೆ ಅಮೆರಿಕಕ್ಕೆ ಹಣದ ಸುರಿಮಳೆ: ಟ್ರಂಪ್‌

donald trump

ಅಮೆರಿಕ ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರ, ತೈಲ ಬೆಲೆ ಏರಿಕೆಯಾದರೆ ಅಮೆರಿಕ ಬಹಳಷ್ಟು ಲಾಭ ಗಳಿಸಲಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು, ತೈಲ ಬೆಲೆಗಳು ಏರಿದಾಗ ನಾವು ಬಹಳ ಹಣ ಗಳಿಸುತ್ತೇವೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ತಡೆಯುವುದು ನನ್ನ ಆದ್ಯತೆ ಎಂದು ಬರೆದುಕೊಂಡಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಮಧ್ಯಪ್ರಾಚ್ಯ ಮತ್ತು ವಾಸ್ತವವಾಗಿ ಜಗತ್ತನ್ನು ನಾಶಪಡಿಸಲು ಹೊರಟಿರುವ ಇರಾನ್‌ನನ್ನು ತಡೆಯತ್ತೇನೆ. ಎಂದಿಗೂ ಇರಾನ್‌ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ ಯುದ್ಧ ಸಾರಿದ್ದಕ್ಕೆ ಪ್ರತೀಕಾರವಾಗಿ ಇರಾನ್‌ ಪಶ್ಚಿಮ ಏಷ್ಯಾದ ನಡುವಿನ ಪ್ರಮುಖ ವ್ಯಾಪಾರ ಕೊಂಡಿಯಾದ ಹರ್ಮುಜ್ ಜಲಸಂಧಿಯಲ್ಲಿ ಹಡಗು ತೈಲ ಟ್ಯಾಂಕರ್‌ ಸಂಚಾರವನ್ನು ತಡೆ ಹಿಡಿದಿದೆ.

ಪ್ರತಿದಿನ 20 ಮಿಲಿಯನ್ ಬ್ಯಾರೆಲ್ ತೈಲವು ಈ ಜಲಸಂಧಿಯ ಮೂಲಕ ಹಾದು ಹೋಗುತ್ತಿತ್ತು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಪರಿಣಾಮ ಕಚ್ಚಾ ತೈಲ ಬೆಲೆ ಮತ್ತೆ ಏರಿದೆ. ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ದರ 100 ಡಾಲರ್‌ ಗಡಿ ದಾಟಿದೆ. ಒಂದು ಬ್ಯಾರೆಲ್‌ ಬ್ರೆಂಟ್‌ ಕಚ್ಚಾ ತೈಲದ ಬೆಲೆ 0.20% ಏರಿಕೆಯಾಗಿ 100.66 ಡಾಲರ್‌ ತಲುಪಿದರೆ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ತೈಲದ ಬೆಲೆ 95.75 ಡಾಲರ್‌ನಲ್ಲಿ ವಹಿವಾಟು ನಡೆಸಿದೆ.

ಮಧ್ಯಪ್ರಾಚ್ಯ ದೇಶಗಳು ಕಚ್ಚಾ ತೈಲ ವ್ಯವಹಾರವನ್ನು ಡಾಲರ್‌ನಲ್ಲೇ ನಡೆಸುತ್ತಿವೆ. ವಿಶ್ವದ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ವೆನಿಜುವೆಲಾದ ತೈಲದ ನಿಯಂತ್ರಣ ಅಮೆರಿಕದ ಕೈಯಲ್ಲಿದೆ. ತೈಲ ಬೆಲೆ ಏರಿಕೆಯಾದರೆ ಬೇರೆ ದೇಶಗಳ ಕರೆನ್ಸಿ ಕುಸಿದರೂ ಡಾಲರ್‌ ಮೌಲ್ಯ ಏರಿಕೆಯಾಗುತ್ತಲೇ ಇರುತ್ತದೆ. ಡಾಲರ್‌ ಮೌಲ್ಯ ಏರಿಕೆಯಾಗುತ್ತಿರುವ ಕಾರಣ ಹೂಡಿಕೆದಾರರು ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ.

Related Posts

Leave a Reply

Your email address will not be published. Required fields are marked *