ವಿಜಯಪುರ ಬಸವನ ಬಾಗೇವಾಡಿ ತಾಳಿಕೋಟೆ ಹೆದ್ದಾರಿಯ ಬಸವನಹಟ್ಟಿ ಕ್ರಾಸ್ ಬಳಿ ಕಾರು ಉರುಳಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಕಾಗವಾಡ ಪಟ್ಟಣದ ಚಂದ್ರವ್ವ ಟಕ್ಕೆನ್ನವರ (70) ಹಾಗೂ ಕಾಮಪ್ಪ ಅವರಾದಿ (65) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ನಾಲ್ವರು ಕಾಗವಾಡದಿಂದ ಶ್ರೀಶೈಲಕ್ಕೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.
ರಸ್ತೆ ಅಪಘಾತಕ್ಕೆ ಅಜ್ಜ, ಮೊಮ್ಮಗಳು ಬಲಿ
ವಿಜಯನಗರ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ, ಅಜ್ಜ, ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕರ್ನಾರಹಟ್ಟಿ ಗ್ರಾಮದ ಈಶ್ವರಪ್ಪ (55) ಹಾಗೂ ಮೊಮ್ಮಗಳು ಸೃಷ್ಟಿ (14) ಮೃತಪಟ್ಟವರು. ಮೃತ ಸೃಷ್ಟಿ ಕೂಡ್ಲಿಗಿ ಪಟ್ಟಣದ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಳು. ಪರೀಕ್ಷೆ ಮುಗಿದ ಬಳಿಕ ತಾತನ ಜೊತೆ ಬೈಕ್ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದಳು.
ಹೆದ್ದಾರಿಯಲ್ಲಿ ರೈತರು ರಾಗಿ ಒಣಗಿಸಲು ಹಾಕಿದ್ದರಿಂದ ಬೈಕ್ ರಾಗಿಯಲ್ಲಿ ಹೋಗಿ ಸ್ಕಿಡ್ ಆಗಿ ಬಿದ್ದಿದೆ. ತಾತ, ಮೊಮ್ಮಗಳು ಕೆಳಕ್ಕೆ ಬಿದ್ದಿದ್ದು, ಹಿಂದಿನಿಂದ ಬರುತ್ತಿದ್ದ ಲಾರಿ ಹರಿದು ಇಬ್ಬರೂ ಸ್ಥಳದಲ್ಲೇ ಅಸು ನೀಗಿದ್ದಾರೆ. ಸ್ಥಳಕ್ಕೆ ಕೂಡ್ಲಿಗಿ ಪಿಎಸ್ಐ, ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


