Menu

ರಾಜ್ಯಸಭೆ ಚುನಾವಣೆ: ಒಡಿಶಾ ಕಾಂಗ್ರೆಸ್‌ ಶಾಸಕರು ಬಿಡದಿಗೆ ಶಿಫ್ಟ್‌

ಮಾರ್ಚ್‌ ೧೬ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿಯಿಂದ ಒಡಿಶಾದ ಕಾಂಗ್ರೆಸ್‌ ಶಾಸಕರನ್ನು ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ.

ಒಡಿಶಾದ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ‘ಆಪರೇಷನ್ ಕಮಲ’ ಪ್ರಯತ್ನ ತಡೆಯಲು ಈ ತಂತ್ರ ರೂಪಿಸಲಾಗಿದೆ. ಭುವನೇಶ್ವರದಿಂದ ಇಂಡಿಗೋ ವಿಮಾನದ ಮೂಲಕ ಒಡಿಶಾದ ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವಿಮಾನ ನಿಲ್ದಾಣದಿಂದ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ.

ಶಾಸಕರಾದ ಮಂಗು ಖಿಲಾ, ಅಪ್ಪಲ ಸ್ವಾಮಿ, ರಾಜನ್ ಎಕ್ಕಾ, ಅಶೋಕ್ ಕುಮಾರ್ ಸೇರಿದಂತೆ ಹಲವು ನಾಯಕರು ಇದ್ದಾರೆ. ಮಾಜಿ ಸಂಸದ ಭಕ್ತ ಚರಣ್ ದಾಸ್ ಹಾಗೂ ಕಾಂಗ್ರೆಸ್ ವಕ್ತಾರ ದುರ್ಗಾ ಪ್ರಸಾದ್ ಪಾಂಡಾ ಸೇರಿ ಒಟ್ಟು 14 ಬೆಂಗಳೂರಿಗೆ ಬಂದಿದ್ದಾರೆ.

147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಿಜೆಡಿ 50 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್‌ನ 14 ಶಾಸಕರು ಇದ್ದಾರೆ. ಬಿಜೆಡಿ ಅಧಿಕೃತ ಅಭ್ಯರ್ಥಿಯಾಗಿ ಡಾ. ಸಂತ್ರಪ್ತ್‌ ಮಿಶ್ರಾ ನಾಮನಿರ್ದೇಶನಗೊಂಡಿದ್ದಾರೆ. ನಾಲ್ಕನೇ ರಾಜ್ಯಸಭಾ ಸ್ಥಾನಕ್ಕೆ ಡಾ. ದತ್ತೇಶ್ವರ್ ಹೋಟಾ ಸಾಮಾನ್ಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಅವರ ಉಮೇದುವಾರಿಕೆಗೆ ಬೆಂಬಲ ನೀಡಿದೆ. ಆಡಳಿತಾರೂಢ ಬಿಜೆಪಿ 79 ಶಾಸಕರ ಬೆಂಬಲ ಹೊಂದಿದ್ದು, ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೊತೆಗೆ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಅವರಿಗೂ ಬೆಂಬಲ ನೀಡಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 30 ಪ್ರಥಮ ಪ್ರಾಶಸ್ತ್ಯದ ಮತಗಳು ಅಗತ್ಯವಿದೆ. ಬಿಜೆಡಿ ತನ್ನ ಅಧಿಕೃತ ಅಭ್ಯರ್ಥಿ ಡಾ. ಸಂತ್ರಪ್ತ್‌ ಮಿಶ್ರಾ ಗೆಲುವಿನ ಹತ್ತಿರವಿದ್ದಾರೆ. ಡಾ. ದತ್ತೇಶ್ವರ್ ಹೋಟಾ ಗೆಲುವು ಕಾಂಗ್ರೆಸ್ ಶಾಸಕರ ಬೆಂಬಲ ಅವಲಂಬಿಸಿದೆ. ಬಿಜೆಪಿ ಬೆಂಬಲಿಸಿರುವ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಎದುರಾಳಿಗಳಿಂದ ಕನಿಷ್ಠ ಎಂಟು ಶಾಸಕರ ಬೆಂಬಲ ಪಡೆದರೆ ಗೆಲುವು ಸಾಧಿಸಬಹುದು. ಇದು ಸ್ಪರ್ಧೆಯಲ್ಲಿ ಅಡ್ಡ ಮತದಾನವನ್ನು ನಿರ್ಣಾಯಕ ಅಂಶವಾಗಿಸುತ್ತದೆ.
ಹೀಗಾಗಿ ಕಾಂಗ್ರೆಸ್ ತನ್ನ ಶಾಸಕರನ್ನು ಒಟ್ಟಿಗೆ ಇರಿಸಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗುವಂತೆ ಮಾಡಲು ಬೆಂಗಳೂರಿಗೆ ಕರೆಸಿಕೊಂಡಿದೆ ಎಂದು ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *