Menu

ಇರಾನ್‌ ನಾಯಕ ಮೊಜ್ತಬಾ ಖಮೇನಿ ಹತ್ಯೆ ಎಚ್ಚರಿಕೆಯಿತ್ತ ಟ್ರಂಪ್‌

ಅಯತೊಲ್ಲಾ ಅಲಿ ಖಮೇನಿಯನ್ನು ಇಸ್ರೇಲ್‌- ಅಮೆರಿಕ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿದ ಬಳಿಕ ಅಲ್ಲಿನ ನೂತನ ನಾಯಕನಾಗಿ ಮೊಜ್ತಬಾ ಖಮೇನಿ ಆಯ್ಕೆ ಆಗಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತೀವ್ರ ವಿರೋಧ ವ್ಯಕ್ತಪಡಿಸಿ ಹತ್ಯೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಬೇಡಿಕೆಗಳಿಗೆ ತಲೆಬಾಗದಿದ್ದರೆ ಮೊಜ್ತಬಾ ಖಮೇನಿಯನ್ನು ಗುರಿಯಾಗಿಸಿ ನಡೆಸುವ ಕಾರ್ಯಾಚರಣೆಯನ್ನು ಬೆಂಬಲಿಸುವುದಾಗಿ ಟ್ರಂಪ್‌ ಹೇಳಿದ್ದಾಗಿ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಇದಕ್ಕೆ ಮೊಜ್ತಬಾ ಖಮೇನಿ ಒಪ್ಪದಿದ್ದರೆ ಅವರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಯಲಿದೆ ಎಂದು ವರದಿಯಾಗಿದೆ. ಈ ಕಾರ್ಯಾಚರಣೆಯನ್ನು ಇಸ್ರೇಲ್ ಮುನ್ನಡೆಸಬಹುದು ಎಂದು ಹೇಳಲಾಗಿದೆ.

ಅಯತೊಲ್ಲಾ ಅಲಿ ಖಮೇನಿ ಹತ್ಯೆ ಬಳಿಕ ಎರಡನೇ ಮಗ ಮೊಜ್ತಬಾ ಖಮೇನಿ ಅಧಿಕಾರ ಹಿಡಿದಿರುವುದು ಟ್ರಂಪ್‌ಗೆ ಅಸಮಾಧಾನ ತಂದಿದೆ, ಇರಾನ್ ಮಾಡಿದ ಈ ಆಯ್ಕೆಯಿಂದ ನನಗೆ ಸಂತೋಷವಾಗಿಲ್ಲ. ಹೊಸ ನಾಯಕ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ.

ಪುತ್ರ ತಮ್ಮ ಉತ್ತರಾಧಿಕಾರಿಯಾಗಬಾರದು ಎಂದು ಅಯತೊಲ್ಲಾ ಅಲಿ ಖಮೇನಿ ಇಚ್ಛಿಸಿ ವಿಲ್‌ನಲ್ಲಿ ಬರೆದಿದ್ದರು ಎನ್ನಲಾಗಿದೆ. ಇರಾನ್‌ನ ಇಸ್ಲಾಮಿಕ್‌ ರೆವೊಲ್ಯೂಷನರಿ ಗಾರ್ಡ್ ಗ್ರೂಪ್ಸ್ ಬೆಂಬಲದಿಂದ ಮೊಜ್ತಬಾ ಖಮೇನಿ ನಾಯಕರಾಗಿದ್ದಾರೆ.
ಇರಾನ್‌ ನಾಯಕತ್ವದಿಂದ ಭಯೋತ್ಪಾದಕ ಚಟುವಟಿಕೆಗಳು ಮುಂದುವರಿದರೆ, ಆ ದೇಶದ ನಾಯಕರನ್ನು ಗುರಿಯಾಗಿಸುವುದಾಗಿ ಇಸ್ರೇಲ್ ಸೇನೆ ಎಚ್ಚರಿಕೆ ನೀಡಿದೆ.

Related Posts

Leave a Reply

Your email address will not be published. Required fields are marked *