Menu

ಭಾರತ ಸೇರಿ ಹಲವು ದೇಶಗಳ ವಿರುದ್ಧ ವ್ಯಾಪಾರ ತನಿಖೆಗೆ ಮುಂದಾದ ಟ್ರಂಪ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಭಾರತ ಸೇರಿದಂತೆ ತನ್ನ 16 ಪಾಲುದಾರ ದೇಶಗಳ ಮೇಲೆ ವ್ಯಾಪಾರ ತನಿಖೆಗೆ ಆದೇಶ ನೀಡಿದೆ. 1974 ರ ವ್ಯಾಪಾರ ಕಾಯ್ದೆಯ ಸೆಕ್ಷನ್‌ 301 ರ ಅಡಿಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಹೇಳಿದ್ದಾರೆ.

ಈ ಹಿಂದೆ ಟ್ರಂಪ್‌ ಆದೇಶಿಸಿದ್ದ  ವ್ಯಾಪಾರ ಸುಂಕ ಸಮರವನ್ನು ಅಮೆರಿಕದ ಸುಪ್ರೀಂಕೋರ್ಟ್‌  ಟೀಕಿಸಿತ್ತು.  ಸುಂಕ ನೀತಿಯನ್ನು ಅಸಂವಿಧಾನಿಕ ಎಂದು ಘೋಷಿಸಿದ್ದು, ಸುಂಕ ವಿಧಿಸುವ ಅಧಿಕಾರ ಸಂಸತ್ತಿಗೆ (Congress) ಹೊರತು ಅಧ್ಯಕ್ಷರಿಗಿಲ್ಲ ಎಂದು ಸ್ಪಷ್ಟಪಡಿಸಿ, ಐತಿಹಾಸಿಕ ತಡೆ ನೀಡಿದೆ.

ಈ ತನಿಖೆಯು ಚೀನಾ, ಯುರೋಪಿಯನ್ ಒಕ್ಕೂಟ, ಭಾರತ, ಜಪಾನ್, ದಕ್ಷಿಣ ಕೊರಿಯಾ ಮತ್ತು ಮೆಕ್ಸಿಕೊ ವಿರುದ್ಧ ಹೊಸ ಸುಂಕಗಳನ್ನು ವಿಧಿಸಲು ಕಾರಣವಾಗಬಹುದು. ತನಿಖೆ ವೇಗವಾಗಿ ನಡೆಯಲಿದ್ದು, ಏಪ್ರಿಲ್ 15 ರವರೆಗೆ ಸಾರ್ವಜನಿಕ ಅಭಿಪ್ರಾಯ ಸ್ವೀಕರಿಸಲಾಗುತ್ತದೆ ಮತ್ತು ಮೇ 5 ರ ಸುಮಾರಿಗೆ ವಿಚಾರಣೆ ನಿಗದಿಪಡಿಸಲಾಗುವುದು ಎಂದು ಜೇಮಿಸನ್ ಗ್ರೀರ್ ತಿಳಿಸಿದ್ದಾರೆ.

ಯಾವುದೇ ದೇಶ ಅಸಮರ್ಪಕ, ಅಸಮ್ಮತ ವ್ಯಾಪಾರ ವಹಿವಾಟು ನಡೆಸಿದರೆ ಆ ದೇಶದ ವಿರುದ್ಧ ಸುಂಕ ಅಥವಾ ಇತರ ಪ್ರತೀಕಾರದ ಕ್ರಮಗಳನ್ನು ವಿಧಿಸಲು ಸೆಕ್ಷನ್‌ 301 ಅಡಿ ಅಮೆರಿಕ ಸರ್ಕಾರಕ್ಕೆ ಅನುಮತಿ ಇದೆ. ವ್ಯಾಪಾರ ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ತೈವಾನ್, ವಿಯೆಟ್ನಾಂ, ಥೈಲ್ಯಾಂಡ್, ಮಲೇಷ್ಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ, ಬಾಂಗ್ಲಾದೇಶ. ಯುರೋಪಿಯನ್ ಯೂನಿಯನ್, ಸ್ವಿಟ್ಜರ್ಲೆಂಡ್, ನಾರ್ವೆ. ಮೆಕ್ಸಿಕೊ ದೇಶಗಳು ತನಿಖಾ ಪಟ್ಟಿಯಲ್ಲಿವೆ.

ಕಾರ್ಮಿಕರಿಂದ ಬಲವಂತವಾಗಿ ಉತ್ಪಾದಿಸಲ್ಪಟ್ಟ ಸರಕುಗಳ ಆಮದನ್ನು ನಿಷೇಧಿಸಲು ಮತ್ತೊಂದು ತನಿಖೆಯನ್ನು ಪ್ರಾರಂಭಿಸುವುದಾಗಿ ಗ್ರೀರ್ ತಿಳಿಸಿದ್ದಾರೆ. ಈ ತನಿಖೆ 60 ಕ್ಕೂ ಹೆಚ್ಚು ದೇಶಗಳ ಮೇಲೆ ನಡೆಯಲಿದೆ.  ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ ಅವರು ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಿಂದ ಆಮದಾಗುವ ಸೌರ ಫಲಕ ಮತ್ತು ಇತರ ಸರಕುಗಳ ಮೇಲೆ ಈ ಹಿಂದೆ ಈ ಕಾಯ್ದೆ ಬಳಸಿ ಕಠಿಣ ಕ್ರಮ ಕೈಗೊಂಡಿದ್ದರು. ಉಯ್ಘರ್ ಮುಸ್ಲಿಮರಿಂದ ಬಲವಂತವಾಗಿ ಸೌರ ಫಲಕಗಳನ್ನು ತಯಾರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಕ್ರಮಕೈಗೊಂಡಿತ್ತು.

ಚೀನಾದ ಪಶ್ಚಿಮ ಭಾಗದಲ್ಲಿ ಉಯ್ಘರ್ ಮತ್ತು ಇತರ ಮುಸ್ಲಿಂ ಗುಂಪುಗಳಿಂದ ಚೀನಾದ ಅಧಿಕಾರಿಗಳು ಕಾರ್ಮಿಕ ಶಿಬಿರಗಳ ಮೂಲಕ ಬಲವಂತವಾಗಿ ಸರಕುಗಳನ್ನು ಉತ್ಪಾದನೆ ಮಾಡಿಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿತ್ತು. ಆದರೆ ಚೀನಾ ಅಮೆರಿಕ ಸರ್ಕಾರದ ಆರೋಪಗಳನ್ನು ನಿರಾಕರಿಸಿತ್ತು.

Related Posts

Leave a Reply

Your email address will not be published. Required fields are marked *