ಇರಾನ್-ಇಸ್ರೇಲ್ ಯುದ್ಧ ಇನ್ನಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ, ಇರಾನ್ ಈಗ ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಸಂಚರಿಸದಂತೆ ಸಮುದ್ರದ ಒಳಗಡೆ ಸ್ಫೋಟಕವನ್ನು ಇರಿಸಿದ ವಿಚಾರ ತಿಳಿದು ಬಂದಿದ್ದು, ಇರಾನ್ ಹರ್ಮುಜ್ ಜಲಸಂಧಿಯಲ್ಲಿ ಯಾವುದೇ ನೇವಲ್ ಮೈನ್ಸ್ ಇದ್ದರೆ ತೆಗೆದು ಹಾಕಬೇಕು. ತೆಗೆಯದೆ ಇದ್ದರೆ ಹಿಂದೆಂದು ಕಾಣದ ರೀತಿ ಮಿಲಿಟರಿ ದಾಳಿ ನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ನೇವಲ್ ಮೈನ್ಸ್ ಹಾಕುತ್ತಿದ್ದ ಇರಾನಿನ 16 ಹಡಗುಗಳನ್ನು ನಾಶ ಮಾಡಿರುವುದಾಗಿ ಅಮೆರಿಕದ ತಿಳಿಸಿದೆ. ನೀರಿನ ಒಳಗಡೆ ಸ್ಫೋಟಕಗಳನ್ನು ಇರಿಸಿ ಹಡಗುಗಳು, ಜಲಾಂತರ್ಗಾಮಿಗಳನ್ನು ನಾಶ ಮಾಡಲು ನೇವಲ್ ಮೈನ್ಸ್ ಬಳಕೆ ಮಾಡಲಾಗುತ್ತದೆ. ಹಡಗುಗಳು ಹತ್ತಿರ ಸುಳಿದಾಗ ಸ್ಫೋಟಗೊಳ್ಳುವಂತೆ ವಿನ್ಯಾಸ ಅಳವಡಿಸಲಾಗಿರುತ್ತದೆ.
ಇರಾನ್ ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಸಂಚರಿಸದಂತೆ ಸಮುದ್ರದ ಒಳಗಡೆ ಸ್ಫೋಟಕ ಇರಿಸಿರುವ ವಿಚಾರ ತಿಳಿಯುತ್ತಿದ್ದಂತೆ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಅವರು ತೈಲ ಟ್ಯಾಂಕರ್ಗೆ ಅಮೆರಿಕ ನೌಕಾಪಡೆ ಬೆಂಗಾವಲು ನೀಡಿದೆ ಎಂಬ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಹರ್ಮುಜ್ ಜಲಸಂಧಿಯಲ್ಲಿ ಅಮೆರಿಕ ನೌಕಾಪಡೆಯ ಬೆಂಗಾವಲಿನಲ್ಲಿ ತೈಲ ಟ್ಯಾಂಕರ್ ಯಶಸ್ವಿಯಾಗಿ ಸಾಗಿದೆ ಎಂದು ಕ್ರಿಸ್ ರೈಟ್ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್, ಅಮೆರಿಕ ನೌಕಾಪಡೆಯ ಹಡಗುಗಳ ಬೆಂಗಾವಲಿನಿಂದ ತೈಲ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ದಾಟಿದೆಯೇ, ಬಹುಶಃ ಪ್ಲೇಸ್ಟೇಷನ್ನಲ್ಲಿ ಇರಬೇಕು ಎಂದು ವ್ಯಂಗ್ಯವಾಡಿದ್ದರು. ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ ವಕ್ತಾರ ವಕ್ತಾರ ಅಲಿಮೊಹಮ್ಮದ್ ನೈನಿ ಅಮೆರಿಕದ ಈ ಹೇಳಿಕೆ ಸಂಪೂರ್ಣ ಸುಳ್ಳು ಕಟ್ಟು ಕಥೆ ಎಂದು ಕರೆದಿದ್ದರು. ಅಮೆರಿಕದ ನೌಕಾಪಡೆ ಮತ್ತು ಅದರ ಮಿತ್ರರಾಷ್ಟ್ರಗಳ ಯಾವುದೇ ಹಡಗುಗಳು ಹರ್ಮುಜ್ ಜಲಸಂಧಿಯನ್ನು ದಾಟಿದರೆ ಅವುಗಳನ್ನು ನಮ್ಮ ಕ್ಷಿಪಣಿಗಳು ಮತ್ತು ಡ್ರೋನ್ಗಳು ತಡೆಯುತ್ತವೆ. ಸಂಘರ್ಷ ಆರಂಭವಾದ ಬಳಿಕ ಅಮೇರಿಕದ ಯುದ್ಧನೌಕೆ ಜಲಸಂಧಿಯನ್ನು ಸಮೀಪಿಸಿಲ್ಲ ಎಂದು ತಿಳಿಸಿದ್ದಾರೆ.
ಲಾಖೆಯ ಸಿಬ್ಬಂದಿ ತಪ್ಪಾಗಿ ಶೀರ್ಷಿಕೆ ನೀಡಿದ್ದರಿಂದ ಪೋಸ್ಟ್ ಅನ್ನು ತೆಗೆದುಹಾಕಿದ್ದಾಗಿ ಅಮೆರಿಕದ ಇಂಧನ ಇಲಾಖೆಯ ವಕ್ತಾರ ಬೆನ್ ಡಯೆಟ್ಡೆರಿಚ್ ಸ್ಪಷ್ಟನೆ ನೀಡಿದ್ದಾರೆ. ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಪ್ರತಿಕ್ರಿಯಿಸಿ, ಅಮೆರಿಕದ ಹಡಗು ಹಾರ್ಮುಜ್ ಜಲಸಂಧಿ ಮೂಲಕ ಹಾದು ಹೋಗಿಲ್ಲ. ಫೆ. 28 ರಂದು ದಾಳಿ ಪ್ರಾರಂಭವಾದಾಗಿನಿಂದ ಯುಎಸ್ ಯುದ್ಧನೌಕೆಗಳಿಂದ ಬೆಂಗಾವಲು ಪಡೆದ ಯಾವುದೇ ವಾಣಿಜ್ಯ ಹಡಗುಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.


