Thursday, January 30, 2025
Menu

ಜಿಲ್ಲಾ ಮಟ್ಟದ 8ನೇ ಜನತಾದರ್ಶನ; 200 ಅಹವಾಲು ಸ್ವೀಕರಿಸಿದ ಸಚಿವ ಸಂತೋಷ ಲಾಡ್

ಧಾರವಾಡ : ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಬೆಳಿಗ್ಗೆ  ಜಿಲ್ಲಾ ಮಟ್ಟದ 8ನೇ ಜನತಾ ದರ್ಶನ ಕಾರ್ಯಕ್ರಮ ನಡೆಸಿದರು.

ಅವರು ಇಂದು ಬೆಳಿಗ್ಗೆ 11:40 ರಿಂದ ಸಂಜೆ 4:45 ಗಂಟೆವರೆಗೆ ನಿರಂತರವಾಗಿ ಐದು ಗಂಟೆಗಳಿಗೂ ಹೆಚ್ಚು ಕಾಲ ಸಾರ್ವಜನಿಕರ ಸಮಸ್ಯೆಗಳನ್ನು ಪೂರ್ಣವಾಗಿ ಆಲಿಸಿ, ಪರಿಹಾರದ ಭರವಸೆ ನೀಡಿದರು. ಜನತಾ ದರ್ಶನ ಮುಗಿಯುವರೆಗೆ ಸುಮಾರು 5 ಗಂಟೆಗೂ ಹೆಚ್ಚು ಕಾಲ ಸಚಿವರು ನಿಂತುಕೊಂಡೆ ಜನರ ಸಮಸ್ಯೆ ಆಲಿಸಿದ್ದು ಎಲ್ಲರ ಗಮನ ಸೆಳೆಯಿತು.

ಸೆಪ್ಟೆಂಬರ 25, 2023 ರಿಂದ ಜನವರಿ 27, 2025 ರ 14 ತಿಂಗಳ ಅವಧಿಯಲ್ಲಿ ಜಿಲ್ಲಾ ಮಟ್ಟದ ಎಂಟು ಜನತಾ ದರ್ಶನ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ಜನತಾ ದರ್ಶನ ಆಯೋಜಿಸಿದ ಏಕೈಕ ಸಚಿವರಾಗಿದ್ದಾರೆ.

ಸಭೆಯುದ್ದಕ್ಕೂ ಸಹನೆಯಿಂದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಸಚಿವರು, ತಪ್ಪು ಕಂಡು ಬಂದಲ್ಲಿ ಅಧಿಕಾರಿಗಳಿಗೆ ಗದರಿಸಿ, ಸರಿಯಾಗಿ ಸಾರ್ವಜನಿಕರ ಸೇವೆ ಮಾಡುವಂತೆ ಎಚ್ಚರಿಸಿದರು. ತಪ್ಪು ಮಾಹಿತಿ ನೀಡಲು ಪ್ರಯತ್ನಿಸುವ ಹಾಗೂ ಅಧಿಕಾರಿಗಳ ಮೇಲೆ ವಿನಾಕಾರಣ ದೂರು ಹೇಳುವವರೆಗೂ ಸಿಟ್ಟಿನಿಂದ ಸಚಿವರು ಬಿಸಿ ಮುಟ್ಟಿಸುತ್ತಾರೆ. ಜನತಾದರ್ಶನಕ್ಕೆ ತಮ್ಮ ಸಮಸ್ಯೆ ಹೊತ್ತು ಬರುವ ಪ್ರತಿಯೊಬ್ಬರನ್ನು ಸಹನೆಯಿಂದ ವಿಚಾರಿಸಿ, ಸರಕಾರದ ಸಹಾಯದೊಂದಿಗೆ, ಅಗತ್ಯವಿದ್ದಲ್ಲಿ ವೈಯಕ್ತಿಕ ನೆರವು ನೀಡುತ್ತಾರೆ. ಅಹವಾಲು ನೀಡಿದವರು ಪರಿಹಾರದ ಭರವಸೆಯೊಂದಿಗೆ ಮನೆಗೆ ಮರಳುತ್ತಾರೆ.

ಜನತಾದರ್ಶನ ಮುಕ್ತಾಯವಾದ ನಂತರ ಸಚಿವ ಸಂತೋμï ಲಾಡ್ ಅವರು ಮಾತನಾಡಿ, ಜನತಾದರ್ಶನಕ್ಕೆ ಪರಿಹಾರದ ಭರವಸೆಯೊಂದಿಗೆ ಸಾರ್ವಜನಿಕರು ಬಂದಿರುತ್ತಾರೆ. ಅವರಿಗೆ ನಿರಾಸೆ ಮೂಡಿಸದೆ ಸಾಧ್ಯವಾದಷ್ಟು ಸ್ಥಳದಲ್ಲಿ ಅವರ ಸಮಸ್ಯೆ ಪರಿಹರಿಸಬೇಕು. ಅಗತ್ಯವಿದ್ದಲ್ಲಿ ಸರಕಾರಕ್ಕೆ ಶಿಫಾರಸ್ಸು ಮಾಡಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ಇಲಾಖೆ ಅಧಿಕಾರಿಗಳು ಸಾರ್ವಜನಿಕ ಕಳಕಳಿ, ಕಾಳಜಿ ಮತ್ತು ಮಾನವೀಯತೆಯಿಂದ ಸಮಸ್ಯೆಗಳನ್ನು, ಅಹವಾಲುಗಳನ್ನು ಆಲಿಸಿದರೆ, ಅರ್ಧ ಪರಿಹಾರ ಸಿಕಷ್ಟು ಅವರು ಖುಷಿಯಾಗುತ್ತಾರೆ. ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸಂವಹನ ಮಾಡಿ ಜನಸ್ನೇಹಿ ಆಡಳಿತ ನೀಡಬೇಕು. ಸರಕಾರದ ಯೋಜನೆ, ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಹೇಳಿದರು.

ಇಂದಿನ ಜನತಾದರ್ಶನದಲ್ಲಿ 200 ಅರ್ಜಿ ಸ್ವೀಕಾರ: ಇಂದು ಜರುಗಿದ ಜನತಾದರ್ಶನದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 61, ಮಹಾನಗರ ಪಾಲಿಕೆಗೆ ಸಂಬಂಧಿಸಿದ 33, ಜಿಲ್ಲಾ ಪಂಚಾಯತ ಸಂಬಂಧಿಸಿದ 16 ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದ 88 ಅರ್ಜಿಗಳು ಸೇರಿ ಒಟ್ಟು 200 ಅರ್ಜಿಗಳನ್ನು ಸ್ವೀಕರಿಸಲಾಯಿತು. ಪ್ರತಿ ಅರ್ಜಿ ಪರಿಶೀಲಿಸಿ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಸಚಿವರು ನಿರ್ದೇಶಿಸಿದರು.

ಜನತಾ ದರ್ಶನದಲ್ಲಿ ಭಾಗವಹಿಸಿದ್ದ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ಜನರ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡುವಲ್ಲಿ ಮತ್ತು ಸರಕಾರದ ನಿಯಮಾವಳಿಗಳನ್ನು ಸಾರ್ವಜನಿಕರಿಗೆ ತಿಳಿಸಿ ಹೇಳುವ ಮೂಲಕ ಜನತಾದರ್ಶನ ಯಶಸ್ವಿಗೆ ಸಹಕರಿಸಿದರು.

ಸೆಪ್ಟೆಂಬರ 25, 2023 ರಿಂದ ಆರಂಭವಾದ ಮೊದಲ ಜನತಾ ದರ್ಶನದಲ್ಲಿ 450, 2ನೇ ಜನತಾ ದರ್ಶನದಲ್ಲಿ 197, 3ನೇ ಜನತಾ ದರ್ಶನದಲ್ಲಿ 177, 4 ನೇ ಜನತಾ ದರ್ಶನದಲ್ಲಿ 112, 5ನೇ ಜನತಾ ದರ್ಶನದಲ್ಲಿ 175, 6ನೇ ಜನತಾ ದರ್ಶನದಲ್ಲಿ 131, 7ನೇ ಜನತಾ ದರ್ಶನದಲ್ಲಿ 213 ಮತ್ತು ಇಂದಿನ 8ನೇ ಜನತಾ ದರ್ಶನದಲ್ಲಿ 200 ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಹಿಂದಿನ ಏಳು ಜನತಾ ದರ್ಶನಗಳಲ್ಲಿ ಸ್ವೀಕರಿಸಿದ್ದ ಒಟ್ಟು 1,455 ಅಹವಾಲುಗಳನ್ನು ನಿಯಮಾನುಸಾರ ಇತ್ಯರ್ಥ ಪಡಿಸಲಾಗಿದೆ.

ಇಂದಿನ ಜನತಾ ದರ್ಶನದಲ್ಲಿ ಮುಖ್ಯವಾಗಿ ಮನೆ ನಿರ್ಮಾಣಕ್ಕೆ ಸಹಾಯಧನ, ಪ್ಲಾಟ್ ಹಕ್ಕುಪತ್ರ, ಆರೋಗ್ಯ ಸಹಾಯ, ರಸ್ತೆ ನಿರ್ಮಾಣ, ಉದ್ಯೋಗ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಕೆ ಆಗಿವೆ.

ಪರಿಶೀಲಿಸಿ ಕ್ರಮವಹಿಸಲು ಜಿಲ್ಲಾಡಳಿತವು ಆಯಾ ಇಲಾಖೆಗಳಿಗೆ ಅಹವಾಲುಗಳನ್ನು ರವಾನಿಸಿ, ಕಾಲಮಿತಿಯಲ್ಲಿ ನಿಯಮಾನುಸಾರ ಸಮಸ್ಯೆ ಇತ್ಯರ್ಥಗೊಳಿಸಿ ವರದಿ ಸಲ್ಲಿಸಲು ಸೂಚಿಸಿದೆ.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾಋಇ ಭುವನೇಶ ಪಾಟೀಲ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಮಹಾನಗರ ಪಾಲಿಕೆ ಆಯುಕ್ತ ರುದ್ದೇಶ ಗಾಳಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ಅವರು ವೇದಿಕೆಯಲ್ಲಿದ್ದರು.

ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಗ್ರಾಮಗಳ ಸಾರ್ವಜನಿಕರು ಜನತಾ ದರ್ಶನದಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *