Menu

ಗಲ್ಫ್‌ನಲ್ಲಿ ಅಮೆರಿಕದ ಬೃಹತ್‌ ರಾಡಾರ್‌ ವ್ಯವಸ್ಥೆ ಧ್ವಂಸಗೊಳಿಸಿದ ಇರಾನ್‌

ಇರಾನ್‌ ವಿರುದ್ಧ ಅಮೆರಿಕ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯ ಬಳಿಕ ಗಲ್ಫ್‌ನಲ್ಲಿ ಅಮೆರಿಕದ ಅತಿದೊಡ್ಡ ರಾಡಾರ್‌ ವ್ಯವಸ್ಥೆಯನ್ನು ನಾಶ ಪಡಿಸಿರುವುದಾಗಿ ಇರಾನ್‌ ಹೇಳಿಕೊಂಡಿದೆ. ಇರಾನ್‌ನ ಪ್ರತೀಕಾರದ ಕಿಚ್ಚು ಮಧ್ಯಪ್ರಾಚ್ಯದ ನಂತರ ಐರೋಪ್ಯ ಒಕ್ಕೂಟಕ್ಕೂ ವ್ಯಾಪಿಸುವ ಭೀತಿ ಎದುರಾಗಿದೆ.

ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಉರಿಯುತ್ತಿರುವ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳು, ರಾಯಭಾರ ಕಚೇರಿಗಳನ್ನು ಗುರಿಯಾಗಿಸಿ ದಾಳಿ ಮುಂದುವರಿಸಿದೆ. ದೋಹಾ, ಮನಾಮ, ದುಬೈನ ಹಲವು ಕಡೆ ಇರಾನ್‌ ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿವೆ. 5,000 ಕಿಮೀ ಗಳ ಟ್ರ್ಯಾಕಿಂಗ್‌ ವ್ಯಾಪ್ತಿಯನ್ನು ಹೊಂದಿದ್ದ ಅಮೆರಿಕದ ರಾಡಾರ್‌ ವ್ಯವಸ್ಥೆಯನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್‌ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಹೊಂದಿದ್ದ ರಾಡಾರ್‌ ವ್ಯವಸ್ಥೆಯು ಸಕಾಲದಲ್ಲಿ ಶತ್ರುಗಳ ಸಂಭಾವ್ಯ ದಾಳಿಯನ್ನು ಪತ್ತೆ ಮಾಡುತ್ತಿತ್ತು. ಅಮೆರಿಕ 2013 ರಲ್ಲಿ ಇದನ್ನು 1.1 ಶತಕೋಟಿ ಡಾಲರ್‌ ವೆಚ್ಚದಲ್ಲಿ ನಿರ್ಮಿಸಿ ಕತಾರ್‌ನಲ್ಲಿರುವ ಅಲ್‌ ಉದೈದ್‌ ವಾಯುನೆಲೆಯಲ್ಲಿ ಇರಿಸಿತ್ತು. ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ವಿಶಿಷ್ಟ ಸಾಧನ ಇದಾಗಿತ್ತು. ಸಾವಿರಾರು ಕಿಮೀ ದೂರದಲ್ಲಿ ಶತ್ರುಗಳ ದಾಳಿಯನ್ನ ಪತ್ತೆಹಚ್ಚುತ್ತಿದ್ದ ರಾಡರ್‌ ವ್ಯವಸ್ಥೆಯನ್ನ ಇರಾನ್‌ ನಿಖರ ಕ್ಷಿಪಣಿ ದಾಳಿ ಮೂಲಕ ಧ್ವಂಸಗೊಳಿಸಿದೆ. ಇರಾನ್‌ ಸೇನೆ ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಕತಾರ್‌ ಅಧಿಕಾರಿಗಳೂ ರಾಡಾರ್‌ ವ್ಯವಸ್ಥೆ ಮೇಲಿನ ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಅಮೆರಿಕದ ಕಣ್ಗಾವಲು ಕಾರ್ಯಾಚರಣೆಯಲ್ಲಿ ತೀವ್ರ ವ್ಯತ್ಯಯವಾಗಿದೆ.

Related Posts

Leave a Reply

Your email address will not be published. Required fields are marked *