ಎನ್ಸಿಇಆರ್ಟಿಯ ಎಂಟನೇ ತರಗತಿಯ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳು ಅಸಮಾಧಾನಗೊಂಡಿ ದ್ದಾರೆ. ನ್ಯಾಯಂಗ ವ್ಯವಸ್ಥೆಯನ್ನು ಕೆಣಕಲು ನಾನು ಯಾರಿಗೂ ಅವಕಾಶ ನೀಡುವುದಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಎಂಟನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕವನ್ನು ಬಿಡುಗಡೆ ಮಾಡಿದೆ. ಹೊಸ ಪುಸ್ತಕವು ನ್ಯಾಯಾಂಗದ ಪಾತ್ರವನ್ನು ವಿವರಿಸುವ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳಂತಹ ಸವಾಲುಗಳನ್ನು ಪರಿಹರಿಸುವ ಹೊಸ ವಿಭಾಗವನ್ನು ಒಳಗೊಂಡಿದೆ.
ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವು ಪ್ರಚಲಿತವಾಗಿದೆ ಎಂದು ಅಧ್ಯಾಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನ್ಯಾಯಾಧೀಶರ ಕೊರತೆ, ಕಾನೂನು ಪ್ರಕ್ರಿಯೆಯ ಸಂಕೀರ್ಣತೆಗಳು ಮತ್ತು ನ್ಯಾಯಾಲಯಗಳಲ್ಲಿ ಸರಿಯಾದ ಮೂಲ ಸೌಕರ್ಯ ಗಳ ಕೊರತೆಗಳಿಂದ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವುದನ್ನು ಪುಸ್ತಕವು ಬೆಟ್ಟು ಮಾಡಿದೆ.
ಭಾರತದ ಸುಪ್ರೀಂ ಕೋರ್ಟ್ನಲ್ಲಿ ಸುಮಾರು 81,000 ಪ್ರಕರಣಗಳು ಬಾಕಿ ಉಳಿದಿವೆ. ಹೈಕೋರ್ಟ್ಗಳಲ್ಲಿ 6,240,000 ಪ್ರಕರಣಗಳು ಬಾಕಿ ಉಳಿದಿವೆ ಎಂಬ ಮಾಹಿತಿಯನ್ನೂ ಒಳಗೊಂಡಿದೆ.


